ಸಮಗ್ರ ನ್ಯೂಸ್ : ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಇಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಹಾಲಿ ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಈ ಬಾರಿ ಟಿಕೆಟ್ ಕೊಡದಂತೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಯಡಿಯೂರಪ್ಪ ಅವರು ಟಿಕೆಟ್ ಫೈನಲ್ ಆಗುವ ಮೊದಲೇ ಶೋಭಾ ಕರಂದ್ಲಾಜೆಗೆ ಟಿಕೆಟ್ ಎಂದು ಹೇಳಿದ್ದು, ಯಡಿಯೂರಪ್ಪ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂದು ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ.
ಉಡುಪಿ ಭಾಗದವರಿಗೇ ಯಾವಾಗಲೂ ಟಿಕೆಟ್ ಸಿಕ್ಕಿದ್ದು, ಈ ಬಾರಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದರೆ ಕೆಲಸ ಮಾಡಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಶಾಸಕ ಅರಗ ಜ್ಞಾನೇಂದ್ರ ಮತ್ತು ಮಾಜಿ ಎಂಎಲ್ಸಿ ಎಂ.ಬಿ. ಭಾನುಪ್ರಕಾಶ್ ನೇತೃತ್ವದಲ್ಲಿ ನಿಗದಿಯಾಗಿದ್ದ ಚುನಾವಣಾ ನಿರ್ವಹಣಾ ಸಮಿತಿಯ ಸಭೆಯಲ್ಲಿ ಈ ಹೈಡ್ರಾಮಾ ನಡೆದಿದೆ. ಕಾರ್ಯಕರ್ತರ ಆಕ್ರೋಶ ತೀವ್ರಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ರದ್ದುಗೊಂಡಿದೆ.