ಸಮಗ್ರ ನ್ಯೂಸ್ : ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಈ ವರ್ಷದ ‘ಮಹಿಳಾ ಚೈತನ್ಯ ದಿನ’ವನ್ನು ಮಾ.8 ಮತ್ತು 9ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಒಕ್ಕೂಟದ ಅಖಿಲಾ ವಿದ್ಯಾಸಂದ್ರ ಬೆಂಗಳೂರು ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಪೆಬ್ ದಾಳಿ ಹಾಗೂ ಹೊಸದಿಲ್ಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಲು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲು 2013ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಈವರೆಗೆ 12 ಜಿಲ್ಲೆಗಳಲ್ಲಿ ಅಚಿತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳಾ ಚೈತನ್ಯ ದಿನವನ್ನಾಗಿ ಆಚರಿಸಲಾಗಿದೆ. ಈ ಬಾರಿ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದರು.
ಮಾ.8ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಗರದ ಅಜ್ಜರಕಾಡಿನ ಪುರಭವನದಲ್ಲಿ ಬೆಳಗ್ಗೆ 9:30ಕ್ಕೆ ‘ಮಹಿಳಾ ಪ್ರಾತಿನಿಧ್ಯ: ಆಶಯ ಮತ್ತು ವಾಸ್ತವ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿವೆ. ಇದರಲ್ಲಿ ಚೆನ್ನೈನ ನ್ಯಾಯವಾದಿ, ಮಹಿಳಾ ಹೋರಾಟಗಾರ್ತಿ ಎ.ಅರುಳ್ ಮೌಳಿ ಆಶಯ ಭಾಷಣ ಮಾಡಲಿದ್ದಾರೆ.
ಬೆಂಗಳೂರಿನ ಕೆ.ಎಸ್.ಲಕ್ಷ್ಮೀ, ಹುಬ್ಬಳ್ಳಿಯ ಶಾಹೀನ್ ಮೊಕಾಶಿ, ಬೆಂಗಳೂರಿನ ಮೈತ್ರಿ, ಮಂಗಳೂರಿನ ಯು.ಟಿ.ಫರ್ಜಾನಾ, ಡಾ.ಸಬಿತಾ ಕೊರಗ ವಿಚಾರ ಮಂಡನೆ ಮಾಡಲಿದ್ದಾರೆ.
ಶನಿವಾರ ಮಾ.9ರಂದು ಬೆಳಗ್ಗೆ 10ಗಂಟೆಗೆ ಅಜ್ಜರಕಾಡಿನ ಹುತಾತ್ಮ ಚೌಕದಲ್ಲಿ ಹಕ್ಕೊತ್ತಾಯ ಜಾಥಾ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಜಾಥಾ ನಡೆಯಲಿದೆ. ಬಳಿಕ ಮಿಷನ್ ಕಾಂಪೌಂಡ್‍ನ ಬಾಸೆಲ್ ಮಿಷನ್ ಚರ್ಚ್ ಹಾಲ್‍ನಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ಅಖಿಲಾ ವಿದ್ಯಾಸಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾನಕಿ ಬ್ರಹ್ಮಾವರ, ಧಾರವಾಡದ ಲಿನೆಟ್, ಉಡುಪಿಯ ವೆರೋನಿಕಾ ಕರ್ನೇಲಿಯೊ, ಕಾರ್ಕಳದ ಹುಮೈರಾ, ಕೃತಿ, ರೇಖಾ ಮುಂತಾದವರು ಉಪಸ್ಥಿತರಿದ್ದರು.