ಸಮಗ್ರ ನ್ಯೂಸ್ :ನಾಡಿನಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ರಾಜ್ಯದ ಪ್ರಮುಖ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳು ನಡೆಯಲಿದ್ದು, ಸಾಮಾನ್ಯವಾಗಿ ಶಿವರಾತ್ರಿಯ ಸಮಯದಲ್ಲಿ ದಕ್ಷಿಣ ಕನ್ನಡ ಪ್ರಮುಖ ದೇವಾಲಯಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾಧಿಗಳು ಪಾದಯಾತ್ರೆಯ ಮೂಲಕ ದೇವರ ದರ್ಶನವನ್ನು ಪಡೆಯುತ್ತಾರೆ.
ಎಂದಿನಂತೆ ಈ ವರ್ಷವೂ ಕೂಡ ನೂರಾರು ಭಕ್ತರು ಧರ್ಮಸ್ಥಳ ಹಾಗೂ ಸುಬ್ರಮಣ್ಯದತ್ತ ಹೆಜ್ಜೆ ಹಾಕುತ್ತಿದ್ದು, ಮಹಾ ಶಿವರಾತ್ರಿಯ ದಿನ ದೇವಾಲಯಗಳನ್ನು ತಲುಪಲಿದ್ದಾರೆ. ಈಗಾಗಲೇ ಕೆಲವು ತಂಡಗಳ ಚಾರ್ಮಾಡಿ ಸೇರಿದಂತೆ ದೇವಾಲಯದ ಸಮೀಪದ ಪ್ರದೇಶಗಳಲ್ಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆ ಹೊರಟಿರುವ ಭಕ್ತಾಧಿಗಳಿಗೆ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ ಆಡಳಿತ ಮಂಡಳಿ ಕೆಲವು ಸೂಚನೆಯನ್ನು ನೀಡಿದೆ.
ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ ಬರುವ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೂಡ ಅತ್ಯಧಿಕ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ. ದಯವಿಟ್ಟು ಪಾದಯಾತ್ರೆಯಲ್ಲಿ ಬರುವ ಭಕ್ತರಲ್ಲಿ ವಿನಂತಿ, ನೀವು ನಡೆದು ಬರುತ್ತಿರುವ ದಾರಿ ಕಾಡುದಾರಿ ಅದು ಸಾವಿರಾರು ಪ್ರಾಣಿಗಳ ಆವಾಸ ಸ್ಥಾನ.
ದಯವಿಟ್ಟು ತಾವುಗಳು ಪ್ಲಾಸ್ಟಿಕ್, ಬಟ್ಟೆ, ಪೇಪರ್, ಬಿಸಾಡಬೇಡಿ ಮತ್ತು ತಮ್ಮ ಉಳಿದ ಆಹಾರವನ್ನು ಆ ಮುಗ್ಧ ಪ್ರಾಣಿಗಳಿಗೆ ಬಿಸಾಡಬೇಡಿ. ಒಮ್ಮೆ ನೀವು ಆಹಾರ ಕೊಟ್ಟರೆ ಆ ಮುದ್ದು ಪ್ರಾಣಿಗಳು ಸುಲಭದಲ್ಲಿ ಸಿಗುವ ಆಹಾರಕೊಸ್ಕರ ರಸ್ತೆಯನ್ನೇ ಅವಲಂಬಿಸುತ್ತವೆ. ಮತ್ತೆ ಮುಂದೊಂದು ದಿನ ಅಪಘಾತಕ್ಕೊಳಗಾಗುತ್ತವೆ. ದಯವಿಟ್ಟು ಎಚ್ಚರವಿರಲಿ ಎಂದು ಮನವಿ ಮಾಡಿದ್ದಾರೆ.
ಪಾದಯಾತ್ರೆ ತೆರಳುತ್ತಿರುವ ಭಕ್ತರು ಸ್ವಚ್ಛತೆ ಕಾಪಾಡಬೇಕು ಎನ್ನುವ ದೃಷ್ಟಿಯಲ್ಲಿ ಸ್ಥಳೀಯರು ದಾರಿಯುದ್ದಕ್ಕೂ ಅಲ್ಲಲ್ಲಿ ಕಸ ಹಾಕಲು ಗೋಣಿ ಚೀಲಗಳನ್ನು ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಭಕ್ತಾಧಿಗಳು ಕಂಡ ಕಂಡಲ್ಲಿ ಕಸ ಎಸೆಯದೇ ಕಸದ ಬುಟ್ಟಿಗೆ ಹಾಕುವಂತೆ ಸೂಚನೆ ನೀಡಲಾಗಿದೆ.
ಪಾದಯಾತ್ರೆ ಬರುತ್ತಿರುವ ಭಕ್ತಾಧಿಗಳಿಗಾಗಿ ರಸ್ತೆಯ ಬದಿಗಳಲ್ಲಿ ಜ್ಯೂಸ್, ನೀರು, ಕಲ್ಲಂಗಡಿ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅರಣ್ಯ ಇಲಾಖೆ ವತಿಯಿಂದ ಮೂಲಕ ಕುಡಿಯುವ ನೀರು, ತಂಗಲು ತಾತ್ಕಾಲಿಕ ಶೆಡ್ ವ್ಯವಸ್ಥೆ ಕೂಡ ಮಾಡಲಾಗಿದೆ. ಉಚಿತ ಆರೋಗ್ಯ ಸೇವೆಯ ಕೌಂಟರ್‍ಗಳನ್ನು ಸಹ ತೆರೆಯಲಾಗಿದ್ದು, ಆ್ಯಂಬುಲೆನ್ಸ್‍ಗಳ ವ್ಯವಸ್ಥೆ ಕೂಡ ಮಾಡಲಾಗಿದೆ.