ಸಮಗ್ರ ನ್ಯೂಸ್: ರಾಜ್ಯದಲ್ಲಿ ಆ್ಯಸಿಡ್ ಮಾರಾಟ ನಿಷೇಧಿಸಲಾಗುವುದು ಮತ್ತು ಆ್ಯಸಿಡ್ ದಾಳಿ ಸಂತ್ರಸ್ತರಿಗೂ ರಕ್ಷಣೆ ನೀಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ, ಇತ್ತೀಚೆಗಷ್ಟೇ ಕಡಬದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿದ್ದ ಹಿನ್ನೆಲೆಯಲ್ಲಿ ಗೃಹ ಸಚಿವರು ಈ ಘೋಷಣೆ ಮಾಡಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ವಿವಿಧ ಮಹಿಳಾ ಸಂಘಟನೆಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಸಲಹೆಗಳನ್ನು ಆಲಿಸಿ ಮಾತನಾಡಿದ ಪರಮೇಶ್ವರ್ ಅವರು, ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅವರ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಮಹಿಳೆಯರು ಮತ್ತು ಮಕ್ಕಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ವಿಧಾನಸೌಧ ಕಚೇರಿ ಅಥವಾ ಗೃಹ ಕಚೇರಿಗೆ ಬಂದು ನನ್ನನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಹೇಳಿದರು.