ಸಮಗ್ರ ನ್ಯೂಸ್: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, NIA ಟೀಂ ತುಮಕೂರಿನಲ್ಲಿ ಶಂಕಿತ ಭಯೋತ್ಪಾದಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಶಂಕಿತ ಬಾಂಬರ್ ಮಾರ್ಚ್1ರಂದು ತುಮಕೂರಿನಲ್ಲಿ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ತುಮಕೂರಿನ ಹಲವೆಡೆ ತೀವ್ರ ಹುಡುಕಾಟ ನಡೆಸಿದ್ದಾರೆ. ಸುಮಾರು 28 ವಾಹನಗಳಲ್ಲಿ ತುಮಕೂರಿಗೆ ಆಗಮಿಸಿರುವ ಪೊಲೀಸರು, ರೈಲ್ವೆ ನಿಲ್ದಾಣ, ಪಾಲಿಕೆ ಕಚೇರಿ, ಪೊಲೀಸ್ ಕಂಟ್ರೋಲ್ ರೂಂ ಸೇರಿ ನಗರದ ಹಲವೆಡೆಯಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಬೆಂಗಳೂರು ಪೊಲೀಸರಿಗೆ ತುಮಕೂರು ಎಸ್‌ಪಿ ಕೆ.ವಿ.ಅಶೋಕ್, ಡಿವೈಎಸ್‌ಪಿ ಚಂದ್ರಶೇಖರ್ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಬಾಂಬ್ ಇಟ್ಟವನಿಗಾಗಿ ಸಿಸಿಬಿ ಮತ್ತು ಎನ್‌ಐಎ ಪೊಲೀಸರು ಮ್ಯಾಪಿಂಗ್ ಮಾಡಿದ್ದು, ಎಲ್ಲಿಂದ ಬಂದ, ಎಲ್ಲಿಗೆ ಹೋದ ಅನ್ನೋ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪೂರ್ತಿ ಮುಖದ ಫೋಟೋಗಾಗಿ ಸಿಸಿಕ್ಯಾಮರಾಗಳನ್ನ ಜಾಲಾಡ್ತಿದ್ದಾರೆ. ಈ ವೇಳೆ ಆರೋಪಿ ತುಮಕೂರಿನಲ್ಲಿ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬೆಂಗಳೂರು ಪೊಲೀಸರು ತುಮಕೂರಿನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಎನ್‌ಐಎ ಬಿಡುಗಡೆ ಮಾಡಿದ ಸಿಸಿಟಿವಿ ಭಾವಚಿತ್ರವನ್ನು ಆಧಾರವಾಗಿಟ್ಟುಕೊಂಡು ಚಿತ್ರಗಾರ ಹರ್ಷ ಅವರು ಆರೋಪಿ ಪೂರ್ಣ ಮುಖವನ್ನು ಊಹಿಸಿಕೊಂಡು ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಂಕಿತ ಉಗ್ರ ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗೂ ವಿತೌಟ್ ಮಾಸ್ಕ್ ಟೋಪಿ ಕನ್ನಡಕ ಧರಿಸಿದ ರೀತಿ ಚಿತ್ರ ಬಿಡಿಸಿದ್ದಾರೆ. ಈ ಇಮ್ಯಾಜಿನರಿ ಸ್ಕೆಚ್ ತನಿಖೆಗೆ ಸಹಾಯವಾಗಬಹುದೆಂದು ಬೆಂಗಳೂರು ಪೊಲೀಸ್ ಮತ್ತು ಎನ್ಐಎಗೆ ಟ್ಯಾಗ್ ಮಾಡಿದ್ದಾರೆ.