ಸಮಗ್ರ ನ್ಯೂಸ್: 11 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಕ್ಕಾಗಿ ಹತ್ಯೆಯಾದ ಬೆಳ್ತಂಗಡಿಯ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಬೇಕೆಂದು ದೆಹಲಿಗೆ ತೆರಳಿದ ಸೌಜನ್ಯ ತಾಯಿ ಮತ್ತು ಹೋರಾಟಗಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಬಿಜೆಪಿ ವತಿಯಿಂದ ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ನ್ಯಾಯಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ಸಂಸದ, ಆಗಿನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸುನೀಲ್ ಕುಮಾರ್ , ಹರೀಶ್ ಪೂಂಜಾ ಇದ್ದ ವೇದಿಕೆಯಲ್ಲಿ ಭಾಗವಹಿಸಿದ್ದ ಸೌಜನ್ಯ ತಾಯಿ ಕುಸುಮಾವತಿ ಭಾಷಣದಲ್ಲಿ ನನ್ನನ್ನು ಪ್ರಧಾನಿ ಮೋದಿಯನ್ನು ಭೇಟಿ ಮಾಡಿಸಬೇಕು ಎಂದಿದ್ದರು.
ಅದಕ್ಕೆ ಅಲ್ಲಿದ್ದ ನಾಯಕರು ಒಪ್ಪಿಗೆ ಸೂಚಿಸಿದರು. ಆದರೆ ಪ್ರತಿಭಟನೆ ನಡೆದು ಹಲವು ತಿಂಗಳು ಕಳೆದರೂ ಬಿಜೆಪಿ ನಾಯಕರು ನೀಡಿದ ಆಶ್ವಾಸನೆ ಈಡೇರಿಸದ ಕಾರಣ ಇದೀಗ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಹೋರಾಟಗಾರರೊನ್ನಳಗೊಂಡ ತಂಡ ದೆಹಲಿಗೆ ಹೋಗಿ ಅಲ್ಲಿ ಕರ್ನಾಟಕ ಭವನದ ಎದುರು ಮಾ.1 ರಂದು ಪ್ರತಿಭಟನೆ ಕೈಗೊಂಡಿದೆ.
ಇಂದು ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿದ ತಂಡ ಅವರ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ತನಿಖೆಗೆ ಒತ್ತಾಯಿಸಬೇಕೆಂದು ಮನವಿ ಮಾಡಿದೆ. ನಂತರ ಸೋನಿಯಾ ಗಾಂಧಿ ಜೊತೆ ಫೋನಲ್ಲಿ ಸೌಜನ್ಯ ಹೋರಾಟಗಾರರು ಮಾತನಾಡಿದ್ದಾರೆ.
ಅಲ್ಲಿಂದ ಹೊರ ಬಂದಾಗ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸ್ ವಿಶೇಷ ಪಡೆ ವಶಕ್ಕೆ ಪಡೆದಿದ್ದು, ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಸೌಜನ್ಯ ತಾಯಿ ಕುಸುಮಾವತಿ , ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ತಮ್ಮಣ್ಣ ಶೆಟ್ಟಿ ಸಹಿತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.