ಸಮಗ್ರ ನ್ಯೂಸ್: ಪೊಲಿಯೋ ರಾಷ್ಟ್ರೀಯ ರೋಗನಿರೋಧಕ ದಿನದ ಅಂಗವಾಗಿ ಮಾರ್ಚ್ 3ರಂದು ನಡೆಯುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಅರ್ಹ ಮಗು ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಲಸಿಕೆ ನೀಡಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರ ಪ್ರದೇಶಗಳಲ್ಲಿ ಲಸಿಕೆ ನೀಡಲು ಅವಶ್ಯಕತೆ ಇರುವ ಕಡೆಗಳಲ್ಲಿ ತರಬೇತಿಯಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ನೇಮಿಸಿಕೊಳ್ಳಲಾಗಿದೆ.
ಪ್ರವಾಸಿ ಸ್ಥಳಗಳು, ಜನಸಂದಣಿ ಹೆಚ್ಚು ಇರುವ ಕಡೆ ಟ್ರಾನ್ಸಿಟ್ ಬೂತ್ಗಳನ್ನು ತೆರೆಯಲಾಗುವುದು. ಲಸಿಕಾ ಕಾರ್ಯಕರ್ತೆಯರು ಇಲ್ಲಿ ಕಂಡು ಬರುವ ಮಕ್ಕಳಿಗೆ ಲಸಿಕೆಯನ್ನು ನೀಡುವರು. ಎಲ್ಲಾ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಟ್ರಾನ್ಸಿಟ್ ಬೂತ್ಗಳನ್ನು ತೆರೆಯಲಾಗುವುದು. ಒಂದರಿಂದ ನಾಲ್ಕನೇ ದಿನದವರೆಗಿನ ದಿನಗಳಲ್ಲಿ ಸಂತೆ ನಡೆಯುವ ಸ್ಥಳಗಳಲ್ಲಿ ಸಹ ಟ್ರಾನ್ಸಿಟ್ ಬೂತ್ಗಳನ್ನು ತೆರೆದು ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದು.
ಕಾರ್ಮಿಕರು ಹೆಚ್ಚಾಗಿ ಇರುವ ತೋಟಗಳನ್ನು ಗುರಿಯಾಗಿಸಿ, ಮನೆ ಮನೆಗೆ ಭೇಟಿ ಸಂದರ್ಭದಲ್ಲಿ ಇಂತಹ ಪ್ರದೇಶಗಳಲ್ಲಿ ಕಂಡುಬರುವ ಮಕ್ಕಳಿಗೆ ಲಸಿಕೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ಮೇಲ್ವಿಚಾರಕರಿಗೆ ಮಾಹಿತಿ ಸೂಚಿಸಲಾಗಿದೆ.
ಸಾರ್ವಜನಿಕರು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಸದುಪಯೋಗ ಮಾಡಿಕೊಂಡು ತಮ್ಮ ಮನೆಯಲ್ಲಿರುವ 0-5 ವರ್ಷದೊಳಗಿನ ಮಕ್ಕಳು ಇದ್ದಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಿಸುವುದು, ತಮ್ಮ ಮನೆಯ ಸಮೀಪವಾಗಲಿ ಅಥವಾ ತಮ್ಮ ತೋಟದಲ್ಲಿ ಕಾರ್ಮಿಕರ ಮಕ್ಕಳೇ ಇರಲಿ ಅಥವಾ ತಮ್ಮ ಮನೆಯ ಸಮೀಪಕ್ಕೆ ಹೊಸದಾಗಿ ಬಂದಿರುವ ಕುಟುಂಬಗಳಲ್ಲಿ 5 ವರ್ಷದೊಳಗಿನ ಮಕ್ಕಳು ಕಂಡುಬಂದಲ್ಲಿ ಹಾಗೂ ತಮ್ಮ ಗಮನಕ್ಕೆ ಬರುವ ಯಾವುದೇ ಮಗುವನ್ನು ಹತ್ತಿರದ ಲಸಿಕಾ ಬೂತ್ಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ತಿಳಿಸಲಾಗಿದೆ.