ಸಮಗ್ರ ನ್ಯೂಸ್: ಷೇರು ಮಾರುಕಟ್ಟೆ ವಾರಾಂತ್ಯದಲ್ಲಿ ಸಖತ್ ಹವಾ ಸೃಷ್ಟಿಸುತ್ತಿದೆ. ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಬಹಳಷ್ಟು ಷೇರುಗಳು ಸಕಾರಾತ್ಮಕ ಸ್ಪಂದನೆ ಪಡೆದಿವೆ. ಹಲವು ಸೂಚ್ಯಂಕಗಳು ಹಸಿರು ಬಣ್ಣದಲ್ಲಿವೆ. ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಭರ್ಜರಿ ಏರಿಕೆ ಪಡೆದಿವೆ.
ಅದರಲ್ಲೂ ಸೆನ್ಸೆಕ್ಸ್ ಹೊಸ ಎತ್ತರಕ್ಕೆ ಏರಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ (bse) ಇಂದು ಶುಕ್ರವಾರ 73,574 ಅಂಕಗಳ ಮಟ್ಟ ಮುಟ್ಟಿತ್ತು. ಇದು ಈವರೆಗೆ ಸೆನ್ಸೆಕ್ಸ್ ಏರಿದ ಗರಿಷ್ಠ ಎತ್ತರ. ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ50 ಸೂಚ್ಯಂಕ ಮತ್ತೊಮ್ಮೆ 22,000 ಅಂಕಗಳ ಗಡಿ ದಾಟಿದೆ.
ಸರ್ಕಾರ ನಿನ್ನೆ ಗುರುವಾರ ಮೂರನೇ ಕ್ವಾರ್ಟರ್ನ ಜಿಡಿಪಿ ದತ್ತಾಂಶವನ್ನು ಬಿಡುಗಡೆ ಮಾಡಿತು. ಎಲ್ಲರ ನಿರೀಕ್ಷೆಗಳನ್ನೂ ಮೀರಿಸಿ, ಶೇ. 8.4ರಷ್ಟು ಆರ್ಥಿಕ ಬೆಳವಣಿಗೆ ಆಗಿರುವುದು ಈ ದತ್ತಾಂಶ ತೋರಿಸಿದೆ. ಏಪ್ರಿಲ್ನಿಂದ ಮೊದಲೆರಡು ಕ್ವಾರ್ಟರ್ನಲ್ಲಿ ಆಗಿದ್ದಕ್ಕಿಂತಲೂ ಮೂರನೇ ಕ್ವಾರ್ಟರ್ನಲ್ಲಿ ಹೆಚ್ಚು ಬೆಳವಣಿಗೆ ಆಗಿದೆ. ಹಲವು ಆರ್ಥಿಕ ವಿಶ್ಲೇಷಕರು 3ನೇ ಕ್ವಾರ್ಟರ್ನಲ್ಲಿ ಶೇ. 6ರಿಂದ 7ರಷ್ಟು ಮಾತ್ರವೇ ಜಿಡಿಪಿ ವೃದ್ಧಿಸಬಹುದು ಎಂದಿದ್ದರು. ಆದ್ದರಿಂದ ಭಾರತದ ಜಿಡಿಪಿ ಬೆಳವಣಿಗೆ ಅಚ್ಚರಿ ಮೂಡಿಸಿದೆ.
ಅಮೆರಿಕದ ಹಣದುಬ್ಬರ ಕೆಳಗಿಳಿದಿರುವುದು ಜಾಗತಿಕವಾಗಿ ಸಕಾರಾತ್ಮಕ ಪರಿಣಾಮ ಬೀರಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರ ಕಡಿತಗೊಳಿಸುವ ಮುನ್ಸೂಚನೆ ದಟ್ಟವಾಗಿದೆ. ಇದೂ ಕೂಡ ಹೂಡಿಕೆದಾರರ ವಿಶ್ವಾಸ ಮೂಡಿಸಿದೆ.