ಸಮಗ್ರ ನ್ಯೂಸ್: ಕರಾವಳಿ ಭಾಗದ ಪ್ರಮುಖ ದೇವಸ್ಥಾನ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಮಹತ್ವದ ಸೂಚನೆ ನೀಡಲಾಗಿದೆ. ಶಿವರಾತ್ರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಕ್ತರ ಅನುಕೂಲಕ್ಕಾಗಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇಗುಲ ಆಡಳಿತ ಮಂಡಳಿ ವಿಶೇಷ ಸೂಚನೆ ನೀಡಿದೆ
ಶಿವರಾತ್ರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ತಂಗಲು ದೇವಾಲಯ ಆಡಳಿತ ಮಂಡಳಿಗೆ ಒಳಪಟ್ಟ ವಿವಿಧ ವಸತಿಗೃಹಗಳ ವೆಬ್‌ಸೈಟ್ ಮೂಲಕ ಭಕ್ತರು ಮುಂಗಡ ಕಾಯ್ದಿರಿಸುತ್ತಾರೆ. ಈ ವೇಳೆ ಎಚ್ಚರ ವಹಿಸುವಂತೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇಗುಲದ ಅಧೀಕೃತ ಫೇಸ್‌ಬುಕ್ ಖಾತೆ ಮುಖ್ಯವಾದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಧರ್ಮಸ್ಥಳ ಭಕ್ತಾಧಿಗಳ ಗಮನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಸತಿ ಗೃಹಗಳನ್ನು ಕ್ಷೇತ್ರದ ಅಧೀಕೃತ ವೆಬ್‌ಸೈಟ್ www.shridharmastala.org ಮೂಲಕ ಮಾತ್ರ ಆನ್‌ಲೈನ್ ಬುಕ್ಕಿಂಗ್ ಮಾಡುವ ಸೌಲಭ್ಯ ನೀಡಲಾಗಿದೆ. ಇದನ್ನು ಹೊರತು ಪಡಿಸಿ ಇನ್ನು ಯಾವುದೇ ವೆಬ್‌ಸೈಟ್ ಮತ್ತು ಫೋನ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಅನಧೀಕೃತ ಬುಕ್ಕಿಂಗ್‌ಗೆ ಶ್ರೀ ಕ್ಷೇತ್ರ ಹೊಣೆಯಾಗುವುದಿಲ್ಲ. ಈ ಬಗ್ಗೆ ಭಕ್ತಾಧಿಗಳು ಎಚ್ಚರ ವಹಿಸಬೇಕಾಗಿ ವಿನಂತಿ ಎಂದು ಮನವಿ ಮಾಡಿದ್ದಾರೆ.
ಈ ಬಾರಿ ಧರ್ಮಸ್ಥಳದ ಶಿವರಾತ್ರಿ ಪಾದಯಾತ್ರೆ ಪ್ಲಾಸ್ಟಿಕ್ ಮುಕ್ತವಾಗಿ ನಡೆಯಬೇಕು ಎಂದು ಈ ಹಿಂದೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ.ಬಿ ಖಂಡ್ರೆ ಭಕ್ತಾಧಿಗಳಲ್ಲಿ ಮನವಿ ಮಾಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿಯ ಸಂದರ್ಭದಲ್ಲಿ ಸಾವಿರಾರು ಜನರು ಪಾದಯಾತ್ರೆಯ ಮೂಲಕ ಬರುತ್ತಾರೆ. ಅರಣ್ಯ ಮಾರ್ಗದಲ್ಲಿ ಬರುವಾಗ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ತಟ್ಟೆ, ಲೋಟ, ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದನ್ನು ವನ್ಯಜೀವಿಗಳು ತಿಂದು ಸಾವಿಗೀಡಾಗುತ್ತವೆ. ಹೀಗಾಗಿ ಈ ಬಾರಿ ಪಾದಯಾತ್ರೆಯಲ್ಲಿ ಬರುವ ಭಕ್ತರು ಅರಣ್ಯ ಪ್ರವೇಶಿಸುವ ಮುನ್ನ ತಪಾಸಣೆ ಮಾಡಿ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.