ಸಮಗ್ರ ನ್ಯೂಸ್: ಸಾಮಾನ್ಯವಾಗಿ ನಾವು ಯಾವುದಾದರೂ, ಮದುವೆ, ಪಾರ್ಟಿ, ಸಮಾರಂಭಕ್ಕೆ ಹೋದಾಗ ಊಟದ ನಂತರ ಬಾಳೆಹಣ್ಣು ನೀಡುವುದನ್ನು ನೀವು ಗಮನಿಸಬಹುದು. ಏಕೆಂದರೆ ಬಾಳೆಹಣ್ಣನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು, ನಿಮ್ಮ ಆರೋಗ್ಯವನ್ನು ಸಮತೋಲನದಲ್ಲಿಡಲು ನಿಮ್ಮ ಆಹಾರದಲ್ಲಿ ಬಾಳೆಹಣ್ಣು ಸೇವಿಸುವುದು ಉತ್ತಮ.
ಬಾಳೆಹಣ್ಣು ಆರೋಗ್ಯದ ಮೇಲೆ ರಕ್ಷಣಾತ್ಮಕ ಪರಿಣಾಮವನ್ನು ಬೀರುವ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಸಮೃದ್ಧವಾಗಿದೆ. ಹಾಗಾಗಿ ಎಲ್ಲ ವಯಸ್ಸಿನವರಿಗೂ ಬಾಳೆಹಣ್ಣು ತಿನ್ನಲು ಆರೋಗ್ಯಕರ ಹಣ್ಣಾಗಿದೆ.
ಅನೇಕ ಮಂದಿ ತೂಕ ಹೆಚ್ಚಾಗುತ್ತದೆ ಎಂಬ ಭಯದಿಂದ ಬಾಳೆಹಣ್ಣು ತಿನ್ನುವುದನ್ನು ತಪ್ಪಿಸುತ್ತಾರೆ. ಆದರೆ ಬಾಳೆಹಣ್ಣುಗಳು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಬಾಳೆಹಣ್ಣನ್ನು ನೀವು ಆಹಾರವಾಗಿ ಸೇವಿಸುವುದರಿಂದ ನಿಮ್ಮ ಹೊಟ್ಟೆ ಹೆಚ್ಚು ಹೊತ್ತು ತುಂಬಿರುತ್ತದೆ. ಅಲ್ಲದೇ ಕಡಿಮೆ ಊಟ ಮಾಡುವಂತೆ ಮಾಡುತ್ತದೆ. ಆದರೆ ಅತಿಯಾಗಿ ತಿಂದರೆ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.
ಹೆಲ್ತ್ಲೈನ್ ಪ್ರಕಾರ, ಬಾಳೆಹಣ್ಣು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್, ಫೈಬರ್, ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಬಿ 6 ನ ಉತ್ತಮ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 2014 ರ ಅಧ್ಯಯನವು ಪ್ರತಿದಿನ ಬಾಳೆಹಣ್ಣು ತಿನ್ನುವುದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಬಹಿರಂಗ ಪಡಿಸಿದೆ.
ಬಾಳೆಹಣ್ಣು ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಸುಮಾರು 3 ಗ್ರಾಂ ನಾರಿನಂಶವಿದೆ. ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಗಳು ಅಧಿಕವಾಗಿದ್ದು, ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಬೇಕು. ಆದರೆ ದಿನವಿಡೀ ಬಾಳೆಹಣ್ಣು ತಿನ್ನಬಾರದು. ಪ್ರತಿಯೊಂದಕ್ಕೂ ಸರಿಯಾದ ಅಳತೆ ಇರುತ್ತದೆ ಎಂಬುವುದನ್ನು ನೆನಪಿಟ್ಟುಕೊಳ್ಳಿ.
ಬಾಳೆಹಣ್ಣು ಕೊಲೆಸ್ಟ್ರಾಲ್ ಸಮಸ್ಯೆ ನಿವಾರಣೆಗೂ ಸಹಕಾರಿ. ಕರಗುವ ನಾರಿನಂಶದಿಂದ ಸಮೃದ್ಧವಾಗಿರುವ ಬಾಳೆಹಣ್ಣನ್ನು ತಿನ್ನುವುದರಿಂದ, ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ ಬಾಳೆಹಣ್ಣು ತಿನ್ನುವುದರಿಂದ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಬಾಳೆಹಣ್ಣುಗಳನ್ನು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ವೈದ್ಯರ ಪ್ರಕಾರ, ನೀವು ಪ್ರತಿದಿನ ಎರಡು ಬಾಳೆಹಣ್ಣುಗಳನ್ನು ತಿನ್ನಬಹುದು. ವ್ಯಾಯಾಮ ಮಾಡುವವರು ಮೂರು ಬಾಳೆಹಣ್ಣು ತಿನ್ನಬಹುದು. ಆದರೆ ಮಧುಮೇಹ ಇರುವವರು ಬಾಳೆಹಣ್ಣು ತಿನ್ನಬಾರದು.