ಸಮಗ್ರ ನ್ಯೂಸ್: ರಾಜ್ಯ ಸರ್ಕಾರಕ್ಕೆ ಮತ್ತೆ ವಿಧಾನ ಪರಿಷತ್ತಿನಲ್ಲಿ ಇಂದು ಮುಜುಗರ ಉಂಟಾಗಿದೆ. ಇಂದು ಮಂಡಿಸಲಾಗಿದ್ದ ಹಿಂದೂ ಧಾರ್ಮಿಕ ದತ್ತಿ ಹಾಗೂ ಧರ್ಮದಾಯ ವಿಧೇಯಕವು ತಿರಸ್ಕೃತಗೊಂಡಿದೆ.
ಇಂದು ವಿಧಾನ ಪರಿಷತ್ತಿನಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಹಿಂದೂ ಧಾರ್ಮಿಕ ದತ್ತಿ ಹಾಗೂ ಧರ್ಮದಾಯ ವಿಧೇಯಕವನ್ನು ಮಂಡಿಸಿದರು. ಆ ಬಳಿಕ ಉಪ ಸಭಾಪತಿ ಪ್ರಾಣೇಶ್ ಅವರು ಧ್ವನಿ ಮತಕ್ಕೆ ಹಾಕಿದರು.
ವಿಧಾನ ಪರಿಷತ್ ನಲ್ಲಿ ಹಿಂದೂ ಧಾರ್ಮಿಕ ವಿಧೇಯಕದ ಪರವಾಗಿ 7 ಮತಗಳು, ವಿರೋಧವಾಗಿ 18 ಮತಗಳು ಚಲಾಯಿಸಲಾಯಿತು. ಹೀಗಾಗಿ ವಿಧೇಯಕದ ವಿರೋಧವಾಗಿ ಹೆಚ್ಚು ಮತ ಚಲಾವಣೆಯಾದ ಕಾರಣ, ವಿಧಾನ ಪರಿಷತ್ ನಲ್ಲಿ ಹಿಂದೂ ಧಾರ್ಮಿಕ ದತ್ತಿ ಹಾಗೂ ಧರ್ಮದಾಯ ವಿಧೇಯಕ ತಿರಸ್ಕೃತಗೊಂಡಿದೆ.
ಹಿಂದೂ ಧಾರ್ಮಿಕ ದತ್ತಿ ವಿಧೇಯಕ ಪರಿಷತ್ ನಲ್ಲಿ ತಿರಸ್ಕೃತಗೊಳ್ಳುತ್ತಿದ್ದಂತೇ ಬಿಜೆಪಿ ಸದಸ್ಯರಿಂದ ಜೈ ಶ್ರೀರಾಮ್ ಎಂಬುದಾಗಿ ಘೋಷಣೆ ಕೂಗಲಾಯಿತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದಿಂದ ಭಾರತ್ ಮಾತಾಕಿ ಜೈ, ಜೈ ಭೀಮ್ ಎಂಬುದಾಗಿ ಘೋಷಣೆ ಕೂಗಲಾಯಿತು.
ಒಟ್ಟಾರೆಯಾಗಿ ರಾಜ್ಯ ಸರ್ಕಾರಕ್ಕೆ ಇಂದು ವಿಧಾನ ಪರಿಷತ್ ನಲ್ಲಿ ಹಿಂದೂ ಧಾರ್ಮಿಕ ದತ್ತಿ ವಿಧೇಯಕ ತಿರಸ್ಕೃತಗೊಳ್ಳುವ ಮೂಲಕ ಭಾರೀ ಮುಜುಗರವೇ ಉಂಟಾಗಿದೆ.