ಸಮಗ್ರ ಉದ್ಯೋಗ: ಮೊದಲೆಲ್ಲಾ ಹತ್ತನೇ ಮುಗಿಸಿ ಪಿಯುಸಿಗೆ (PUC) ಎಂಟ್ರಿ ಕೊಟ್ಟರೆ ಸಾಕು, ಮನೆಯಲ್ಲಿರುವವರು, ಸಂಬಂಧಿಕರು ಮತ್ತು ಸ್ನೇಹಿತರು ಕೇಳುತ್ತಿದ್ದ ಮೊದಲ ಪ್ರಶ್ನೆ ಎಂದರೆ ಅದು ದ್ವಿತೀಯ ಪಿಯುಸಿಯಲ್ಲಿ (2nd PUC) ಯಾವ ವಿಷಯಗಳನ್ನು ತೆಗೆದುಕೊಳ್ಳುತ್ತೀರಾ ಅಂತ. ಆಗ ಯಾರಿಗೆ ಕೇಳಿದರೂ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ ಅಂತ ಹೇಳುತ್ತಿದ್ದರು. ತುಂಬಾ ಕಡಿಮೆ ಅಂಕಗಳನ್ನು ತೆಗೆದುಕೊಂಡವರು ಮತ್ತು ಪರೀಕ್ಷೆಯಲ್ಲಿ ಫೇಲ್ ಆದವರು ಮಾತ್ರ ಹೆಚ್ಚಾಗಿ ಪರೀಕ್ಷೆಯಲ್ಲಿ ಪಾಸಾದ ನಂತರ ಕಲಾ ಮತ್ತು ವಾಣಿಜ್ಯ ವಿಷಯಗಳನ್ನು ಆರಿಸಿಕೊಳ್ಳುತ್ತಿದ್ದರು.
ಆದರೆ ಈಗ ಈ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ, ಏಕೆಂದರೆ ಹತ್ತನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಕಲೆ, ವಾಣಿಜ್ಯ ವಿಷಯದಲ್ಲಿ ಅನೇಕ ವೃತ್ತಿಪರ ಕೋರ್ಸ್‌ಗಳು ಲಭ್ಯವಿವೆ. 12ನೇ ತರಗತಿಯ ಫಲಿತಾಂಶಗಳು ಎಲ್ಲಾ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿವೆ, ಏಕೆಂದರೆ ಅವರು ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣುವ ಹಂತವಾಗಿರುತ್ತದೆ ಅಂತ ಹೇಳಬಹುದು.
ಅನೇಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ನೋಡಿದ ನಂತರ ಮುಂದೆ ಏನು ಮಾಡಬೇಕೆಂದು ಮತ್ತು ಏನು ಓದಬೇಕೆಂದು ಗೊಂದಲಕ್ಕೊಳಗಾಗಬಹುದು ಮತ್ತು ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಯಾವ ವಿಷಯಗಳನ್ನು ಅಧ್ಯಯನ ಮಾಡಬೇಕು ಎಂದು ತುಂಬಾನೇ ಯೋಚಿಸಬಹುದು. ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಷಯಗಳೊಂದಿಗೆ ಉತ್ತೀರ್ಣರಾಗುವ ವಿದ್ಯಾರ್ಥಿಗಳು 12ನೇ ತರಗತಿಯ ನಂತರ ಕೆಲವು ಉತ್ತಮ ವೃತ್ತಿ ಆಯ್ಕೆಗಳನ್ನು ಹೊಂದಿದ್ದಾರೆ.
ನೀವು ಕಲಾ ವಿಷಯದೊಂದಿಗೆ ದ್ವಿತೀಯ ಪಿಯುಸಿಯನ್ನು ಮುಗಿಸಿದ್ದರೆ, ನೀವು ಮುಂದೆ ಪದವಿಯಲ್ಲಿ ಫ್ಯಾಶನ್ ಡಿಸೈನಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್, ಪ್ರಾಡಕ್ಟ್ ಡಿಸೈನ್, ಶೂ ಡಿಸೈನ್, ಎಥ್ನೋಗ್ರಫಿ, ಡಿಪ್ರೆಶನ್ ಕೌನ್ಸೆಲಿಂಗ್, ಬೇಕರಿ ಮತ್ತು ಸ್ವೀಟ್ಸ್, ಲೆದರ್ ಡಿಸೈನಿಂಗ್ ಮತ್ತು ಗ್ರಾಫಾಲಜಿಯಂತಹ ವೃತ್ತಿಗಳನ್ನು ಪರಿಗಣಿಸಬಹುದು. ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ರೇಡಿಯೋ ಪತ್ರಿಕೋದ್ಯಮ, ಜಾಹೀರಾತು, ಅನಿಮೇಷನ್, ವೆಬ್ ಡಿಸೈನಿಂಗ್, ಮಾಧ್ಯಮ ಸಂಶೋಧನೆ ಮತ್ತು ಡಿಜಿಟಲ್ ಮಾಧ್ಯಮದಂತಹ ವಿವಿಧ ಮಾರ್ಗಗಳನ್ನು ನೀಡುವ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮವನ್ನು ಅನೇಕ ಕಲಾ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ವಾಣಿಜ್ಯ ವಿದ್ಯಾರ್ಥಿಗಳಿಗೆ ಬಿಬಿಎ, ಬಿಕಾಂ, ಬಿಎ ಅರ್ಥಶಾಸ್ತ್ರ, ಎಂಬಿಎ ಮತ್ತು ಪಿಜಿಡಿಎಂ ನಂತಹ ಲಾಭದಾಯಕ ವೃತ್ತಿ ಆಯ್ಕೆಗಳಿವೆ. ಚಾರ್ಟರ್ಡ್ ಅಕೌಂಟೆಂಟ್, ಕಂಪನಿ ಸೆಕ್ರೆಟರಿ, ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ (ಸಿಪಿಎ), ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ (ಸಿಎಂಎ), ಡಿಜಿಟಲ್ ಮಾರ್ಕೆಟರ್ ಅಥವಾ ಪ್ರಾಡಕ್ಟ್ ಮ್ಯಾನೇಜರ್ ಆಗುವುದರ ಜೊತೆಗೆ 12ನೇ ತರಗತಿಯ ನಂತರ ಬ್ಯಾಂಕಿಂಗ್ ಮತ್ತು ಅಕೌಂಟೆನ್ಸಿ ಪ್ರಮುಖ ವೃತ್ತಿ ಮಾರ್ಗಗಳಾಗಿವೆ.