ಸಮಗ್ರ ನ್ಯೂಸ್: ನೀವು ಚಿರತೆಯನ್ನು ಹೋಲುವ ಬೆಕ್ಕನ್ನು ನೋಡಿರಬಹುದು. ಆದರೆ ಜಿಂಕೆ ಮರಿಯ ತದ್ರೂಪಿಯಂತೆ ತೋರುವ ಬೇರೊಂದು ಪ್ರಾಣಿಯನ್ನು ಕಂಡಿದ್ದೀರಾ? ಹಾಗಾದ್ರೆ ಈ ವಿಡಿಯೋದಲ್ಲಿರುವ ಪುಟ್ಟ ಪ್ರಾಣಿಯನ್ನು ನೋಡಿ. ಇದು ಅಳಿಲು ಮರಿ ಅಥವಾ ಇಲಿ ಮರಿ ಅಥವಾ ಜಿಂಕೆ ಮರಿ ಆಗಿರಬಹುದು ಎಂದು ನೀವು ಯೋಚಿಸಿದಲ್ಲಿ ನಿಮ್ಮ ಊಹೆ ತಪ್ಪು.
ಸುಂಟಿಕೊಪ್ಪ ಸಮೀಪದ ಹೊರೂರು ಕಾಫಿ ಬೆಳೆಗಾರರಾದ ಪಿ.ಸಿ. ಮೋಹನ್ ರವರಿಗೆ ಸೇರಿದ ಗ್ರೀನ್ ಫೀಲ್ಡ್ ಎಸ್ಟೇಟ್ ನಲ್ಲಿ ನೆನ್ನೆ ದಿನ ಬೆಳಗ್ಗೆ ಆಚನಾಕಾಗಿ ಕಾರ್ಮಿಕರ ಕಣ್ಣಿಗೆ ಬಿದ್ದ ಅಳಿವಿನಂಚಿನಲ್ಲಿರುವ ಅಳಿಲಿನಂತೆಯೂ ಭಾಸವಾಗುವ ಮೌಸ್ ಡೀರ್ ಎಂಬ ಸಸ್ತನಿ ಇದು. ಜಿಂಕೆ ಪ್ರಾಣಿ ವರ್ಗದಲ್ಲಿ ಅತ್ಯಂತ ಚಿಕ್ಕ ಪ್ರಾಣಿ ವರ್ಗಕ್ಕೆ ಸೇರಿರುವ ಇದು ಅತ್ತ ಇಲಿಯೂ ಅಲ್ಲ ಇತ್ತ ಜಿಂಕೆಯೂ ಅಲ್ಲ! ಆದರೂ ಇಲಿ ಮತ್ತು ಜಿಂಕೆಗಳ ಸಮ್ಮಿಶ್ರಣದಂತಿರುವುದರಿಂದ ಈ ವರ್ಗದ ಪ್ರಾಣಿಗೆ ಇಂಗ್ಲಿಷ್ ನಲ್ಲಿ ಮೌಸ್ ಡೀರ್ ಎಂದು ಹೆಸರಿಸಲಾಗಿದೆ. ಕೊಡವ ಭಾಷೆಯಲ್ಲಿ “ಬರುಕ” ಎಂತಲೂ ಕರೆಯಲಾಗುತ್ತದೆ. ಹರಿಣಿಯಂತೆ ಬೆದರುವ ಹಾಗೂ ತುಂಬಾ ಸಾಧು ಸ್ವಭಾವದ ಇದು ಅಪಾಯಕಾರಿಯೂ ಅಲ್ಲ.
ಶಾಖಹಾರಿಗಳಾದ ಮೌಸ್ ಡೀರ್ ಗಳು ಎಲೆ, ಮೊಗ್ಗು, ಹಣ್ಣುಗಳನ್ನು ತಿನ್ನುತ್ತವೆ. ಹಗಲಿನ ವೇಳೆ ಗಾಢ ನಿದ್ದೆಯಲ್ಲಿ ಜಾರಿಕೊಳ್ಳುವ ಇವುಗಳು ಅಪಾಯಕಾರಿ ಸನ್ನಿವೇಶಗಳಲ್ಲಿ ಜಿಂಕೆಯಂತೆಯೇ ಛಂಗನೇ ಜಿಗಿದು ಜೀವ ಉಳಿಸಿಕೊಳ್ಳುವಲ್ಲಿ ನಿಸ್ಸೀಮ ಎನಿಸಿವೆ. ರಾತ್ರಿ ವೇಳೆ ಉದರ ನಿಮಿತ್ತಂ ಚುರುಕುಗೊಳ್ಳುತ್ತವೆ. ಕ್ಯೂಟ್ ಕೂರ್ಗ್ ನ್ಯೂಸ್ ವತಿಯಿಂದ ಕಲೆ ಹಾಕಲಾದ ಮಾಹಿತಿ ಪ್ರಕಾರ ಮೌಸ್ ಡೀರ್ ನಮ್ಮ ದೇಶಕ್ಕೆ ಮಾತ್ರವಲ್ಲದೇ ಜಗತ್ತಿಗೆ ಕಾಣ ಸಿಗುವುದು ತೀರಾ ಅಪರೂಪ ಎಂದು ತಿಳಿದುಬಂದಿದೆ. ಮೊದಲ ಬಾರಿಗೆ 1910ರಲ್ಲಿ ವಿಯೆಟ್ನಾಂ ನಲ್ಲಿ ಕಂಡುಬಂದಿದ್ದು, ಭಾರತದಲ್ಲಿ ಛತ್ತಿಸ್ ಘಡ ಕಾಂಗ್ರಾ ನ್ಯಾಷನಲ್ ಪಾರ್ಕ್ ನಲ್ಲಿ 2023ರ ಮೇ ತಿಂಗಳಲ್ಲಿ ಗೋಚರಿಸಿದೆ.
ಅಂದಹಾಗೇ ನೆನ್ನೆ(ಫೆ.23) ದಿನ ಗ್ರೀನ್ ಫೀಲ್ಡ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇದನ್ನು ಕಂಡು ತೋಟದ ಸಿಬ್ಬಂದಿ ಹಾಗೂ ಕ್ಯೂಟ್ ಕೂರ್ಗ್ ನ್ಯೂಸ್ ಎಡ್ಮಿನ್ ಓ.ಜಿ. ಮಣಿ ಅವರಿಗೆ ಒಪ್ಪಿಸಿದ್ದಾರೆ. ಮಣಿ ಅವರು ಕ್ಯೂಟ್ ಕೂರ್ಗ್ ಪ್ರತಿನಿಧಿಗೆ ಮಾಹಿತಿ ನೀಡಿ ಅರಣ್ಯ ಇಲಾಖೆಗೆ ಒಪ್ಪಿಸಲು ಇಂದು ಬಾಳೆ ಕಾಡು ಆಟೋ ಚಾಲಕ ಪ್ರವೀಣ್ ಅವರೊಂದಿಗೆ ಸುಂಟಿಕೊಪ್ಪಕ್ಕೆ ಕಳುಹಿಸಿಕೊಟ್ಟಿದ್ದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಇಂದು ಬೆಳಗ್ಗೆ ಸುಂಟಿಕೊಪ್ಪಕ್ಕೆ ಆಗಮಿಸಿದ ಕುಶಾಲನಗರ ಡಿ.ಆರ್.ಎಫ್.ಓ. ಅನಿಲ್ ರವರಿಗೆ ಅಪರೂಪದ ಅತಿಥಿಯನ್ನು ಹಸ್ತಾಂತರಿಸಲಾಯಿತು.