ಸಮಗ್ರ ನ್ಯೂಸ್: ಮಂಗಳೂರು ನಗರದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಶಾಲೆಯ ವಿದ್ಯಾರ್ಥಿನಿಯೋರ್ವರ ತಾಯಿ ಕವಿತಾ ಅವರಿಗೆ ಅಪರಿಚಿತರು ಜೀವಬೆದರಿಕೆ ಹಾಕಿರುವ ಕುರಿತಾಗಿ ಕಂಕನಾಡಿ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅಪರಿಚಿತರು ವಾಯ್ಸ ಮೆಸೇಜ್‌ಗಳನ್ನು ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಕವಿತಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದು ಕತಾರ್, ಸೌದಿ ಮೊದಲಾದೆಡೆಗಳಿಂದ ಬೆದರಿಕೆಗಳು ಬಂದಿರುವುದು ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕವಿತಾ ಅವರು ತೊಕ್ಕೊಟ್ಟಿನಲ್ಲಿ ಶಿಕ್ಷಕಿಯಾಗಿದ್ದು ಧರ್ಮದ ಅವಹೇಳನ ಪ್ರಕರಣ ನಡೆದಿರುವ ಶಾಲೆಯಲ್ಲಿ ಅವರ ಪುತ್ರಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಆಕೆ ಕೂಡ ತನ್ನ ತಾಯಿ ಕವಿತಾ ಅವರ ಬಳಿ ತರಗತಿಯಲ್ಲಿ ಧರ್ಮದ ಅವಹೇಳನ ಮಾಡುತ್ತಿರುವ ವಿಚಾರ ತಿಳಿಸಿದ್ದಳು.
ಇದನ್ನು ಡಿಡಿಪಿಐ ಅವರ ಗಮನಕ್ಕೆ ತರಲು ಕವಿತಾ ಹಾಗೂ ಇತರ ಕೆಲವು ಪೋಷಕರು, ಹಿಂದೂ ಸಂಘಟನೆಯವರು ಡಿಡಿಪಿಐ ಕಚೇರಿ ಬಳಿ ತೆರಳಿದ್ದರು. ಆಗ ಅಲ್ಲಿ ಮಾಧ್ಯಮಗಳಿಗೂ ಹೇಳಿಕೆ ನೀಡಿದ್ದರು. ಆ ಬಳಿಕ ಕವಿತಾ ಅವರನ್ನು ಶಾಲೆಯ ಆಡಳಿತ ಮಂಡಳಿ ಕೆಲಸದಿಂದ ತೆಗೆದು ಹಾಕಿತ್ತು. ಅಲ್ಲದೆ ಅನಂತರ ಆಕೆಗೆ ಅಪರಿಚಿತರಿಂದ ಬೆದರಿಕೆ ಕರೆಗಳು ಬಂದಿದ್ದವು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.