ಸಮಗ್ರ ನ್ಯೂಸ್: ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಮತ್ತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಭೀತಿ ಎದುರಾಗಿದೆ. ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಕರಾವಳಿ ಮಾರುಕಟ್ಟೆಗಳಿಗೆ ಆಗಮಿಸುತ್ತಿರುವುದು ಈ ಭೀತಿಗೆ ಕಾರಣವಾಗಿದೆ.
ಅತ್ಯಂತ ಹೆಚ್ಚು ಗುಣಮಟ್ಟದ ಅಡಿಕೆ ಬೆಳೆಯುವ ಪ್ರದೇಶವಾದ ಕರಾವಳಿ ಭಾಗದ ಅಡಿಕೆಗೆ ಉತ್ತರ ಭಾರತದ ಹಲವೆಡೆ ಭಾರೀ ಬೇಡಿಕೆಯಿದೆ. ಈ ಬೇಡಿಕೆಗಳಿಗೆ ಅನುಗುಣವಾಗಿ ಕರಾವಳಿ ಭಾಗದ ಕೃಷಿಕರು ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದು, ಕೊರೊನಾ ಲಾಕ್ ಡೌನ್ ಬಳಿಕ ಅಡಿಕೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ಲಭಿಸುತ್ತಿತ್ತು. ಕೆಜಿ ಗೆ 500 ರೂಪಾಯಿ ಗಡಿದಾಟಿದ್ದ ಅಡಿಕೆ ಬೆಲೆ ಇದೀಗ ನಿಧಾನವಾಗಿ ಕುಸಿಯಲಾರಂಭಿಸುತ್ತಿದೆ.
ಹೊಸ ಅಡಿಕೆ ಬೆಲೆ ಇದೀಗ ಕಿಲೋವೊಂದಕ್ಕೆ 315ರಿಂದ 320ರ ಆಸುಪಾಸಿನಲ್ಲಿದ್ದು, ಹಳೆ ಅಡಿಕೆ ಬೆಲೆ 430-440 ರ ಆಸುಪಾಸಿನಲ್ಲಿದೆ. ಆದರೆ ಬರ್ಮಾ ಹಾಗೂ ಇತರ ಕಡೆಗಳಲ್ಲಿ ಇದೇ ರೀತಿಯ ಅಡಿಕೆಯನ್ನು ಬೆಳೆಯಲಾಗುತ್ತಿದ್ದು, ದೇಶೀ ಮಾರುಕಟ್ಟೆಗೆ ಹೋಲಿಸಿದರೆ, ಅದರ ಬೆಲೆ ತೀರ ಕಡಿಮೆಯಾಗಿದೆ. ಈ ಅಡಿಕೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಹಲವು ನಿಬಂಧನೆಗಳಿದ್ದರೂ, ಹೆಚ್ಚಿನ ಲಾಭಗಳಿಸುವ ಉದ್ಧೇಶದಿಂದ ಅಡಿಕೆ ಖರೀದಿದಾರರು ವಿದೇಶಿ ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಆಮದಾಗುವ ಅಡಿಕೆಗಳಲ್ಲಿ ಕೆಲವು ಮಾತ್ರ ತೆರಿಗೆ ಕಟ್ಟಿ ದೇಶಿ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಅದಕ್ಕಿಂತ ದುಪ್ಪಟ್ಟು ಪ್ರಮಾಣದ ಅಡಿಕೆ ಅಕ್ರಮವಾಗಿ ಆಮದಾಗುತ್ತಿದೆ.
ಈ ಅಡಿಕೆಯನ್ನು ದಕ್ಷಿಣ ಕನ್ನಡ ಭಾಗದಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಬೆರೆಸಿ ಉತ್ತರ ಭಾರತಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ದಕ್ಷಿಣಕನ್ನಡ ಜಿಲ್ಲೆಯ ಅಡಿಕೆಯ ಗುಣಮಟ್ಟವೂ ಕುಸಿಯುವ ಜೊತೆಗೆ ಬೆಲೆಯೂ ಕುಸಿಯುವ ಆತಂಕವಿದೆ. ದಕ್ಷಿಣ ಕನ್ನಡದ ಬಹುಪಾಲು ಕೃಷಿಕರು ಅಡಿಕೆಯನ್ನೇ ತನ್ನ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದು, ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ ಬದಲಾವಣೆಗಳಾದರೂ, ಅದು ನೇರವಾಗಿ ಅಡಿಕೆ ಬೆಳೆಗಾರನ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಜಿಲ್ಲೆಯ ಬಹುತೇಕ ವಹಿವಾಟುಗಳಲ್ಲಿ ಅಡಿಕೆಯ ಪಾತ್ರವೂ ಪ್ರಮುಖವಾಗಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಡಿಕೆ ಬೆಳೆಗಾರರ ಹಿತ ಕಾಯಬೇಕಿದೆ.