ಸಮಗ್ರ ನ್ಯೂಸ್: ಪರೀಕ್ಷೆ ವೇಳೆ ನಿದ್ರೆ ತಪ್ಪಿಸಲು ಮಕ್ಕಳು ಉಗ್ರರು ಸೇವಿಸುತ್ತಿದ್ದ ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ ಎಂಬ ಶಾಕಿಂಗ್ ಮಾಹಿತಿ ಬಯಲಾಗಿದೆ. ಪರೀಕ್ಷೆಯ ಸಮಯದಲ್ಲಿ ಹೆಚ್ಚು ನಿದ್ರೆ ಬಾರದೇ ಇರಲಿ ಎಂದು ವಿದ್ಯಾರ್ಥಿಗಳು ಉಗ್ರರು ನುಂಗುವಂತಹ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
10ನೇ ತರಗತಿ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಉತ್ತರ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಇತ್ತೀಚೆಗೆ ಏಕಾಏಕಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಳು. ನಂತರ ಪರೀಕ್ಷೆ ನಡೆಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು, ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ನರಗಳೆಲ್ಲಾ ಊದಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಸದ್ಯ ಈಕೆ ಚೇತರಿಸಿಕೊಂಡಿದ್ದಾಳೆ.
ಆಕೆಯ ಪೋಷಕರು ವಿದ್ಯಾರ್ಥಿನಿಯ ಕೋಣೆ ತಪಾಸಣೆ ಮಾಡಿದಾಗ ಅಲ್ಲಿ ಒಂದು ಬಾಟಲ್ನಲ್ಲಿ ಸಿಕ್ಕಿದೆ. ಅದನ್ನು ವೈದ್ಯರಿಗೆ ತೋರಿಸಿದಾಗ ಅದು ನಿದ್ದೆಯಿಂದ ತಪ್ಪಿಸಿಕೊಳ್ಳಲು ಬಳಸುವ ಮಾತ್ರೆ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಪರೀಕ್ಷೆ ವೇಳೆ ರಾತ್ರಿಯಿಡೀ ಎಚ್ಚರದಿಂದಿರಲು ಈ ಮಾತ್ರೆ ಸೇವಿಸುತ್ತಿದ್ದೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ. ದುಷ್ಕೃತ್ಯಕ್ಕೆ ಕಾರ್ಯಾಚರಣೆ ನಡೆಸುವ ವೇಳೆ ಉಗ್ರರು ನಿದ್ರೆ ಬಾರದೇ ಇರಲಿ ಎಂಬ ಕಾರಣಕ್ಕೆ ಈ ಮಾತ್ರೆಗಳನ್ನು ಸೇವಿಸುತ್ತಾರೆ.
ಇದು ವಿದ್ಯಾರ್ಥಿನಿಯ ಕೈಗೆ ಹೇಗೆ ಸಿಕ್ಕಿತು ಎಂಬುದೇ ಅಚ್ಚರಿ ಉಂಟುಮಾಡಿದೆ. ಇಂಥ ಮಾತ್ರೆಗಳ ಬಳಕೆ ತಡೆಗೆ ಅಗತ್ಯ ಕ್ರಮ, ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.