ಸಮಗ್ರ ವಿಶೇಷ: ಅದು ನೂರ ಇಪ್ಪತ್ತೈದು ವರ್ಷಗಳ ಅವಿಚ್ಚಿನ್ನ ಪರಂಪರೆ. ಆ ಬೆಳಗ್ಗಿನ ಗಂಜಿ ಊಟಕ್ಕೆ ಶತಮಾನಗಳ ಇತಿಹಾಸ. ಜನ ರಸ್ತೆಯುದ್ದಕ್ಕೂ ಸರತಿ ಸಾಲಿನಲ್ಲಿ ನಿಂತು ಬೆಳಗ್ಗಿನ ಗಂಜಿಗಾಗಿ ಕಾಯುತ್ತಿರುವ ದೃಶ್ಯ ಕಂಡು ಬಂದಿದ್ದು, ಮಂಗಳೂರಿನ ವಿಟಿ ರೋಡ್‌ನಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ.
ಮಂಗಳೂರಿನ ಸುಪ್ರಸಿದ್ಧ ವೆಂಕಟರಮಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಐದು ದಿನ ಬೆಳಗ್ಗಿನ ಗಂಜಿಯನ್ನು ನೀಡಲಾಗುತ್ತದೆ. ಬ್ರಹ್ಮರಥೋತ್ಸವದ ದಿನದಂದು ಮಾತ್ರ ಉದ್ದಿನ ದೋಸೆ, ಕಿಚಡಿಗಳ ಉಪಹಾರವನ್ನು ನೀಡಲಾಗುತ್ತದೆ.
ಸಾವಿರಾರು ಜನ ಈ ಬೆಳಗ್ಗಿನ ತಿಂಡಿಗೆ ಸದರಿ ಸಾಲಿನಲ್ಲಿ ನಿಂತು ಪ್ರಸಾದ ರೂಪದ ತಿಂಡಿ ಸೇವಿಸುವುದು ವಿಶೇಷವಾಗಿದೆ. ಇನ್ನೂರು ವರ್ಷಗಳ ಇತಿಹಾಸವಿರುವ ಮಂಗಳೂರಿನ ರಥಬೀದಿಯ ವೆಂಕಟರಮಣ ದೇವರ ಜಾತ್ರಾ ಮಹೋತ್ಸವ ಹತ್ತೂರಿನ ಜನರಿಗೆ ಸಂಭ್ರಮದ ಹಬ್ಬ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಜನರಿಗಂತೂ ಮನೆ ಕಾರ್ಯಕ್ರಮದಂತೆ ಖುಷಿ. ನೂರ ಇಪ್ಪತ್ತೈದು ವರ್ಷಗಳ ಹಿಂದೆ ಬೇರೆ ಬೇರೆ ಊರುಗಳಿಂದ ಬರುವ ಜನರಿಗಾಗಿ ಬೆಳಗ್ಗಿನ ಗಂಜಿ ಊಟವನ್ನು ತಯಾರಿಸಿ ವಿಠೊಭಾ ರುಕುಮಾಯಿ ದೇವಸ್ಥಾನದಲ್ಲಿ ಬಡಿಸಲಾಗುತ್ತಿತ್ತು. ಹೋಟೆಲ್, ವಾಹನಗಳಿಲ್ಲದ ಆ ಜಮಾನದಲ್ಲಿ ಈ ಗಂಜಿ ಊಟ ಜನರ ಉದರವನ್ನು ತಣಿಸುತಿತ್ತು. ಅಂದಿನಿಂದ ಗಂಜಿ ಊಟದ ಪರಂಪರೆ ಇಂದಿಗೂ ಮುಂದುವರಿಸಿಕೊಂಡು ಬರಲಾಗಿದೆ.
ಕಾಲದ ಪ್ರಭಾವದಿಂದ ಈಗ ಗಂಜಿ ಊಟಕ್ಕೆ ಹಲವು ಪದಾರ್ಥಗಳ ಸೇರ್ಪಡೆಯಾಗಿದೆ. ಬೆಳ್ತಿಗೆಯ ಅಕ್ಕಿಯ ಗಂಜಿ, ಉಪ್ಪಿನಕಾಯಿ, ಕಾಳು ಪಲ್ಯ, ಮತ್ತೊಂದು ಗಸಿ. ಜಾತ್ರೆಯ ಎಲ್ಲಾ ದಿನ ಈ ಗಂಜಿ ಊಟ ಇದ್ದರೆ ಶ್ರೀ ದೇವರ ಬ್ರಹ್ಮ ರಥೋತ್ಸವದ ದಿನದಂದು ಮಾತ್ರ ಅಕ್ಕಿಯ ಊಟ ಮಾಡುವಂತಿಲ್ಲ. ಹೀಗಾಗಿ ಉದ್ದಿನ ದೋಸೆ, ಗೋಡಂಬಿ ಪಲ್ಯ, ತರಕಾರಿ ಸಾಂಬಾರು, ಕಿಚಡಿಯನ್ನು ಈ ಬಾರಿ ತಯಾರು ಮಾಡಲಾಗಿದೆ. ಸಾವಿರಾರು ಜನ ಈ ಉಪಹಾರವನ್ನು ಸವಿದಿದ್ದಾರೆ. ಪ್ರತಿ ದಿನ ನಾಲ್ಕು ಸಾವಿರಕ್ಕಿಂತ ಜನ ಈ ಉಪಹಾರವನ್ನು ಸೇವಿಸೋದು ವಿಶೇಷವಾಗಿದೆ.
ಕೃಪೆ: ವನ್ ಇಂಡಿಯಾ