ಸಮಗ್ರ ನ್ಯೂಸ್: ಕರ್ನಾಟಕ ಸರ್ಕಾರದ ಸಂವಿಧಾನ ಜಾಗೃತಿ ಜಾಥದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಫೆ.17 ರಂದು ನಡೆಯುವ ಸಂವಿಧಾನ ಜಾಥಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂವಿಧಾನ ವಿರೋಧಿ ಮನಸ್ಥಿತಿ ಹೊಂದಿರುವ ಕೊಡಗು ಸಂಪಾಜೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲೋಕ್ಯ ನಾಯ್ಕ ಬಿ. ಯವರಿಂದ ಸಾರ್ವಜನಿಕರಿಗೆ ಸಂವಿಧಾನದ ಬಗ್ಗೆ ಮಾಹಿತಿ ಜಾಗೃತಿ ಮೂಡಿಸುತ್ತಿರುವುದು ದುರದೃಷ್ಟಕರ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಪಾಜೆ ಗ್ರಾಮ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಈ ವ್ಯಕ್ತಿ ಸಂವಿಧಾನದ ಆಶಯಗಳನ್ನು ತುಳಿದು ಕಾನೂನನ್ನು ಮೀರಿ ಬಾಬರಿ ಮಸೀದಿಯನ್ನು ಹೊಡೆದುರಳಿಸಿದ ಕರಸೇವಕರುಗಳನ್ನು ಸಂಪಾಜೆ ಯಲ್ಲಿ ಅಭಿನಂದಿಸಿ ಸನ್ಮಾನ ಮಾಡಿದ್ದು ಇಡೀ ಸಂಪಾಜೆ ಗ್ರಾಮಕ್ಕೆ ಗೊತ್ತಿದೆ. ಇಂತಹ ವ್ಯಕ್ತಿಗಳಿಂದಲೇ ಸಂವಿಧಾನದ ಬಗ್ಗೆ ಜಾಗೃತಿಯನ್ನು ಜನಸಾಮಾನ್ಯರಿಗೆ ಮೂಡಿಸುವುದು ಎಷ್ಟರ ಮಟ್ಟಿಗೆ ಸರಿ.
ಬಾಬರಿ ಮಸೀದಿಯ ಧ್ವಂಸವು ಸಂವಿಧಾನದ ಆಶಯಗಳನ್ನು ಹಾಗೂ ಕಾನೂನನ್ನು ಉಲ್ಲಂಘಿಸಿ ಮಾಡಿದ ಭಯೋತ್ಪಾದನಾ ಕೃತ್ಯ ಎಂದು ಇಡೀ ಜಗತ್ತಿಗೆ ಗೊತ್ತಿದೆ.ಹಾಗೂ ಅದನ್ನು ದೇಶದ ಸರ್ವೋಚ್ಚ ನ್ಯಾಯಾಲಯವು ಕೂಡ ಒಪ್ಪಿದೆ.
ನ್ಯಾಯಾಲಯವು ಬಹುಸಂಖ್ಯಾತರ ಭಾವನೆಗಳನ್ನು ಪರಿಗಣಿಸಿ ತೀರ್ಪು ನೀಡಿದೆಯೇ ಹೊರತು ಮಸೀದಿಯ ಧ್ವಂಸದ ಕೃತ್ಯವೂ ಸರಿಯಾಗಿತ್ತು ಎಂಬ ಕಾರಣಕ್ಕಲ್ಲ ಎಂಬುದು ವಾಸ್ತವ.ಹೀಗಿರುವಾಗ ಈ ವ್ಯಕ್ತಿಯನ್ನು ಸಂವಿಧಾನ ಜಾಗೃತಿ ಮೂಡಿಸಲು ಆಯ್ಕೆ ಮಾಡಿದ ಸಂಪಾಜೆ ಗ್ರಾಮ ಪಂಚಾಯತಿನ ಈ ನಡೆಯು ಖಂಡನೀಯವಾಗಿದೆ ಹಾಗೂ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಇವರ ಬದಲಿಗೆ ಸಂವಿಧಾನ ಒಪ್ಪುವ ಜಾತ್ಯಾತೀತ ಮನಸ್ಥಿತಿಯುಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.