Ad Widget .

ಬಂಗಾರದ ಮನುಷ್ಯ ಸಿನಿಮಾದ ಹಾಡಿನಿಂದ ಪ್ರಾರಂಭವಾದ 2024-25ನೇ ಬಜೆಟ್| ಸಿದ್ದು ಬಜೆಟ್ ನ ಸಂಪೂರ್ಣ ಹೈಲೈಟ್ಸ್

ಸಮಗ್ರ ನ್ಯೂಸ್: ದೇಶ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸುಸಂದರ್ಭದಲ್ಲಿ ನನ್ನ 15ನೇ ಆಯವ್ಯಯ ಮಂಡನೆ ಮಾಡುತ್ತಿದ್ದೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಾಮಾಜಿಕ ಸಮಾನತೆಯ ಉದ್ದೇಶದೊಂದಿಗೆ ಈ ಬಜೆಟ್ ಮಂಡನೆ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂಬ ಡಾ.ರಾಜ್ ಕುಮಾರ್ ರವರ ಬಂಗಾರ ಮನುಷ್ಯ ಸಿನಿಮಾದ ಹಾಡಿನ ಸಾಲು ಉಲ್ಲೇಖಿಸುತ್ತ 2024-25 ನೇ ಬಜೆಟ್ ಅನ್ನು ಪ್ರಾರಂಭಿಸಿದ್ದಾರೆ.

Ad Widget . Ad Widget . Ad Widget .

ಬಜೆಟ್ ನಲ್ಲಿ ನೀಡಿದ ಸಂಪೂರ್ಣ ಮಾಹಿತಿ ಇಲ್ಲಿದೆ:

ಕನ್ನಡ ಭಾಷಾಂತರಕ್ಕೆ ನೂತನ ತಂತ್ರಾಂಶ ಕನ್ನಡ ಕಸ್ತೂರಿ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ
ಕನ್ನಡ ಭಾಷಾಂತರಕ್ಕೆ ನೂತನ ತಂತ್ರಾಂಶ ಅಭಿವೃದ್ಧಿಪಡಿಸಲಾಗುವುದು. ಕನ್ನಡ ಕಸ್ತೂರಿ ಎಂಬ ನೂತನ ತಂತ್ರಾಂಶ ಅಭಿವೃದ್ಧಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದ್ದಾರೆ.

ಆಡಳಿತ ವ್ಯವಸ್ಥೆ ಬಲಪಡಿಸಲು ತಂತ್ರಜ್ಞಾನ ಬಳಕೆ
ಆಡಳಿತ ವ್ಯವಸ್ಥೆ ಬಲಪಡಿಸಲು ತಂತ್ರಜ್ಞಾನ ಬಳಕೆ ಮಾಡಲಾಗುವುದು. ಕೃತಕ ಬುದ್ಧಿಮತ್ತೆ, ಮಿಷನ್ ಲರ್ನಿಂಗ್ ತಂತ್ರಜ್ಞಾನ ಬಳಕೆ ಮಾಡಲಾಗುವುದು. ನೂತನ ಪೊಲೀಸ್​ ಠಾಣಾ ಕಟ್ಟಡಗಳಿಗೆ ₹30 ಕೋಟಿ ಮೀಸಲು ಇಡಲಾಗುವುದು. ವಿಧಿ ವಿಜ್ಞಾನ ಪ್ರಯೋಗಾಲಯಗಳ ಮೊಬೈಲ್ ಫೊರೆನ್ಸಿಕ್​, ಆಡಿಯೋ ಮತ್ತು ವಿಡಿಯೋ ವಿಭಾಗ ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. 10 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಉಪಕರಣ, ತಂತ್ರಾಂಶ ಪೂರೈಕೆ ಮಾಡಲಾಗುವುದು. ಎಲ್ಲಾ ಕಾರಾಗೃಹಗಳ ಸುಗಮ ಆಡಳಿತ ಹಾಗೂ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ ಎಐ ತಂತ್ರಾಂಶ ಬಳಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ 4 ಸ್ಥಳಗಳಲ್ಲಿ ಹೈಟೆಕ್​ ಕ್ರೀಡಾ ಸಂಕೀರ್ಣ:
ಬೆಂಗಳೂರಿನ 4 ಸ್ಥಳಗಳಲ್ಲಿ ಹೈಟೆಕ್​ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಕ್ರೀಡಾನಗರ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ. 70 ಎಕರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾನಗರ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ. ರಾಜ್ಯದ 14 ವರ್ಷದ ಕ್ರೀಡಾಪಟುಗಳಿಗೆ ಮಿನಿ ಒಲಿಂಪಿಕ್ಸ್ ಆಯೋಜನೆ ಮಾಡಲಾಗುವುದು. ರಾಜ್ಯದ ಕ್ರೀಡಾಪಟುಗಳಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗುವುದು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸೂಫಿ ಅಧ್ಯಯನ ಪೀಠ
ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸೂಫಿ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುವುದು. ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸಿದ್ದರಾಮೇಶ್ವರ ಅಧ್ಯಯನ ಪೀಠ ರಚನೆ ಮಾಡಲಾಗುವುದು. ಮಾಜಿ ಸಿಎಂ ಬಂಗಾರಪ್ಪನವರ ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ ಇ-ಆಫೀಸ್: ಸಿಎಂ ಸಿದ್ದರಾಮಯ್ಯ
ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್​ ಆರಂಭಿಸಲಾಗುವುದು. ಗ್ರಾಮ ಪಂಚಾಯಿತಿಗಳ ಸಭೆ, ಕಾರ್ಯಕಲಾಪಗಳ ನೇರಪ್ರಸಾರ ಮಾಡಲಾಗುವುದು. ರಾಜ್ಯದ 50 ಗ್ರಾ.ಪಂ.ಗಳಿಗೆ ಹೊಂಬೆಳಕು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಪ್ರತಿ ತಾಲೂಕಿನಲ್ಲಿ ಕನಿಷ್ಠ 2ರಂತೆ ಬೂದುನೀರು ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆ ಬಾಗಿಲಿಗೆ ಆಹಾರ: ಅನ್ನ ಸುವಿಧಾ ಯೋಜನೆ ಘೋಷಣೆ
80 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ ಅನ್ನ ಸುವಿಧಾ ಯೋಜನೆಯನ್ನು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಈ ಯೋಜನೆ ಮೂಲಕ ಅಂಥ ವೃದ್ಧರ ಮನೆ ಬಾಗಿಲಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ, 10 ಜಿಲ್ಲೆಗಳಲ್ಲಿ ವಲಸೆ ನಿರ್ಮಾಣ ಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗುವುದು. ತಾತ್ಕಾಲಿಕ ವಸತಿ ಸಮುಚ್ಚಯಕ್ಕಾಗಿ 100 ಕೋಟಿ ರೂ. ಅನುದಾನ ನೀಡಲಾಗುವುದು. ಕೊಳಗೇರಿ ನಿವಾಸಿಗಳಿಗೆ ಶೀಘ್ರದಲ್ಲೇ 48,796 ಮನೆಗಳ ಹಸ್ತಾಂತರ ಮಾಡಲಾಗುವುದು. ಕಾರ್ಮಿಕರಿಗೆ ESI ಯೋಜನೆಯಡಿ ಸೂಪರ್​ಸ್ಪೆಷಾಲಿಟಿ ಸೇವೆಗೆ 313 ಕೋಟಿ ರೂ. ಅನುದಾನ ಮೀಸಲು ಇಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

1,500 ವಿಶೇಷ ಚೇತನರಿಗೆ ದ್ವಿಚಕ್ರ ವಾಹನಗಳ ವಿತರಣೆ
ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರೈಕೆಗೆ 4 ಕೇಂದ್ರಗಳನ್ನು ಆರಂಭಿಸಲಾಗುವುದು. 4 ಅನುಪಾಲನಾ ಕೇಂದ್ರಗಳ ಸ್ಥಾಪನೆಗೆ 2 ಕೋಟಿ ರೂ. ಅನುದಾನ ಒದಗಿಸಲಾಗುವುದು. 1,500 ವಿಶೇಷ ಚೇತನರಿಗೆ ದ್ವಿಚಕ್ರ ವಾಹನಗಳ ವಿತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್
ಅಂಗನವಾಡಿ ಕಾರ್ಯಕರ್ತರಿಗೆ 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು. 100 ಕೋಟಿ ವೆಚ್ಚದಲ್ಲಿ 1,000 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಟಿ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಬೆಂಗಳೂರಿನ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆ: ಬಜೆಟ್​ನಲ್ಲಿ ಮಹತ್ವದ ಘೋಷಣೆ
ಬೆಂಗಳೂರಿನ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆ ಒದಗಿಸಲಾಗುವುದು. ಇದಕ್ಕೆ 430 ಪ್ರಯೋಗಾಲಯಗಳ ಸ್ಥಾಪನೆಗೆ 20 ಕೋಟಿ ಮೀಸಲು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದರು. ವೈದ್ಯಕೀಯ ಕಾಲೇಜುಗಳ ನಿರ್ಮಾಣ, ಉಪಕರಣ ಖರೀದಿಗೆ 400 ಕೋಟಿ ಅನುದಾನ ನೀಡಲಾಗುವುದು. ಸೂಪರ್​ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 130 ಕೋಟಿ ರೂ. ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಖಾಲಿ ಇರುವ ಶಿಕ್ಷಕರ, ಉಪನ್ಯಾಸಕರ ನೇಮಕಕ್ಕೆ ಕ್ರಮ: ಸಿಎಂ ಘೋಷಣೆ
ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಕ, ಉಪನ್ಯಾಸಕರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಕಾಲೇಜು ಸೌಲಭ್ಯಕ್ಕಾಗಿ 250 ಕೋಟಿ ರೂಪಾಯಿ ಮೀಸಲು ಇಡಲಾಗುವುದು. ಖಾಲಿ ಇರುವ ಶಿಕ್ಷಕರ, ದೈಹಿಕ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಏನೇನು ಸಿಕ್ತು?
ರಾಜ್ಯದ ಅಸ್ಮಿತೆ, ಸಂಸ್ಕೃತಿಗೆ ಅನುಗುಣವಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಕ್ಕೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಉಪನ್ಯಾಸಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಕಾಲೇಜುಗಳಿಗೆ ಉಚಿತ ಕರೆಂಟ್ ನೀಡಲಾಗುವುದು. ಎಲ್ಲಾ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ನಿರಂತರ ನೀರಿನ ಸೌಲಭ್ಯ, ಫ್ರೀ ಕರೆಂಟ್​ಗೆ 25 ಕೋಟಿ ರೂಪಾಯಿ ಮೀಸಲು ಇಡಲಾಗುವುದು. ಮಹಿಳಾ ಪಾಲಿಟೆಕ್ನಿಕ್​​ ಉನ್ನತೀಕರಣಕ್ಕೆ 30 ಕೋಟಿ ರೂ. ಮೀಸಲು ಇಡಲಾಗುವುದು. ರಾಜ್ಯದ 20 ಸಾವಿರ ವಿಜ್ಞಾನ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗಾಗಿ 10 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ ಅನುದಾನ, ಕಾಲೇಜು ಸೌಲಭ್ಯಕ್ಕಾಗಿ 250 ಕೋಟಿ ರೂಪಾಯಿ ಮೀಸಲು ಇಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ವಕ್ಫ್​​ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರೂ.:
ವಕ್ಫ್​​ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರೂ. ಒದಗಿಸಲಾಗುವುದು. ಜೈನ್​ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ. ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

ಸೈನ್ಸ್​ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿಗೆ 10 ಕೋಟಿ ರೂ.:
ರಾಜ್ಯದ 20 ಸಾವಿರ ಸೈನ್ಸ್​ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗೆ 10 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ.

ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ:
ಸರ್ಕಾರಿ ಪ್ರೌಢ ಶಾಲೆಗಳ ಅಭಿವೃದ್ಧಿಗೆ 50 ಕೋಟಿ ರೂ. ಮೀಸಲಿಡಲಾಗುವುದು. ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್​ ಹಾಗೂ ಇಂಟರ್​ನೆಟ್​ ಸೌಲಭ್ಯಕ್ಕೆ 50 ಕೋಟಿ ಪ್ಯಾಕೇಜ್ ನೀಡಲಾಗುವುದು. 2 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

ಸುಳ್ಳು ಸುದ್ದಿ ತಡೆಗೆ ಸತ್ಯಶೋಧನಾ ತಂಡ: ಸಿಎಂ ಘೋಷಣೆ
ಸುಳ್ಳು ಸುದ್ದಿ ತಡೆಗಟ್ಟಲು ಐಟಿಬಿಟಿ ಇಲಾಖೆಯ ಸಹಯೋಗದಲ್ಲಿ ಸತ್ಯ ತಪಾಸಣಾ ತಂಡ ಹಾಗೂ ವಿಶೇಷ ಕೋಶ ರಚನೆ ಮಾಡಲಾಗುವುದು. ದೀಫ್​ ಫೇಕ್​​ ಹಾಗೂ ಸೈಬರ್ ಕ್ರೈಂ ತಡೆಗೆ 43 ಹೊಸ ಪೊಲೀಸ್​ ಸಿಇಎನ್​ ಠಾಣೆ ಆರಂಭಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಗೆ 28 ಸಾವಿರದ 608 ಕೋಟಿ ರೂಪಾಯಿ ಮೀಸಲು:
ಗೃಹಲಕ್ಷ್ಮೀ ಯೋಜನೆಗೆ 28 ಸಾವಿರದ 608 ಕೋಟಿ ರೂಪಾಯಿ ಮೀಸಲು ಇಡಲಾಗುವುದು. 1.33 ಕೋಟಿ ಮಹಿಳೆಯರಿಗೆ ಯೋಜನೆಯಿಂದ ಲಾಭವಾಗಲಿದೆ. ಜನವರಿ 31ರವರೆಗೆ 1.27 ಕೋಟಿ ಮಹಿಳೆಯರ ನೋಂದಣಿಯಾಗಿದೆ, 11726 ಕೋಟಿ ನೇರವಾಗಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. 2024-25ರಲ್ಲಿ 28,608 ಕೋಟಿ ಹಣ ರೂಪಾಯಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಘೋಷಣೆ ಮಾಡಿದರು.

ಗೋದಾಮುಗಳ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ:
76 ಗೋದಾಮುಗಳ ನಿರ್ಮಾಣಕ್ಕೆ 376 ಕೋಟಿಗಳ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಲಾಗಿದೆ. ಜತೆಗೆ APMCಗಳಲ್ಲಿ ವಿದ್ಯುತ್​ಚಾಲಿತ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಪೆಟ್ರೋಲ್​ ಬಂಕ್​ಗಳ ಮಾದರಿಯಲ್ಲಿ ಇವುಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

2024ರ ಮೇನಲ್ಲಿ ಕಾವೇರಿ ಹಂತ-5 ಕಾರ್ಯಾರಂಭ:
2024ರ ಮೇನಲ್ಲಿ ಕಾವೇರಿ ಹಂತ-5 ಕಾರ್ಯಾರಂಭಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. 5550 ಕೋಟಿ ರೂ. ವೆಚ್ಚದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯಿಂದ ಯೋಜನೆ. ಪ್ರತಿ ದಿನ 12 ಲಕ್ಷ ಜನರಿಗೆ 110 ಲಕ್ಷ ಲೀಟರ್ ಕುಡಿಯುವ ನೀರು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ. ಕಾವೇರಿ ಹಂತ-5ರಡಿ ಡಿಸೆಂಬರ್ 24ರಲ್ಲಿ ಒಳಚರಂಡಿ ಕಾಮಗಾರಿ ಪೂರ್ಣ. ಇದರಿಂದ 228 ಕಿ.ಮೀ ವ್ಯಾಪ್ತಿಯಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದರು.

ಮಂಗಳೂರಿನಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ:
ಮಂಗಳೂರಿನಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ನಿರ್ಮಾಣ ಮಾಡಲಾಗುವುದು. 35 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

ಬೆಂಗಳೂರು ಉಪ ರೈಲು ಯೋಜನೆ ಚುರುಕುಗೊಳಿಸಲು ನಿರ್ಧಾರ:
ಬೆಂಗಳೂರು ಉಪ ರೈಲು ಯೋಜನೆ ಚುರುಕುಗೊಳಿಸಲು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ. ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗಿನ ಕಾರಿಡಾರ್-2 ವೇಗವಾಗಿ ಅನುಷ್ಠಾನ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು. ಬಿಎಂಟಿಸಿಗೆ ಹೊಸದಾಗಿ 1334 ಹೊಸ ಇವಿ ಬಸ್‌ ಖರೀದಿಗೆ ನಿರ್ಧಾರ, ಜೊತೆಗೆ ಬಿಎಂಟಿಸಿಗೆ 820 ಬಿಎಸ್‌6 ಡೀಸೆಲ್‌ ಬಸ್‌ ಸೇರ್ಪಡೆ, ಮಹಿಳೆಯರ ಸುರಕ್ಷತೆಗಾಗಿ ಬಿಎಂಟಿಸಿ ಬಸ್‌ಗಳಲ್ಲಿ ಆ್ಯಪ್ ಅನುಷ್ಠಾನ, ವೆಹಿಕಲ್ ಟ್ರ್ಯಾಕಿಂಗ್‌ ಹೊಂದಿರುವ ಆ್ಯಪ್ ಅನುಷ್ಠಾನ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಬಜೆಟ್​​ನಲ್ಲಿ ಸಿಎಂ ಘೋಷಣೆ
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದರು. ಇದರೊಂದಿಗೆ, ಗ್ರಾಮೀಣ ಪತ್ರಕರ್ತರ ದಶಕಗಳ ಕನಸು ನನಸಾಗಿದೆ.

ಮೀನುಗಾರರ ರಕ್ಷಣೆಗೆ ಸಮುದ್ರ ಆಂಬುಲೆನ್ಸ್: ಸಿಎಂ ಘೋಷಣೆ
ಮೀನುಗಾರಿಕೆ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ 3 ಸಾವಿರ ಕೋಟಿ ಯೋಜನೆ ಘೋಷಿಸಿದ್ದಾರೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ತುರ್ತು ಸಂದರ್ಭಗಳಲ್ಲಿ ರಕ್ಷಣೆಗೆ ಮಾಡುವುದಕ್ಕಾಗಿ ಅತ್ಯಾಧುನಿಕ ಸಮುದ್ರ ಆಂಬುಲೆನ್ಸ್ ಖರೀದಿಸಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ.

ಹೊನ್ನಾವರ ಅಥವಾ ಕಾಸರಗೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಭದ್ರಾವತಿಯಲ್ಲಿ ಹೈಟೆಕ್​ ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ಕಾಲೇಜು:
ತೋಟಗಾರಿಕೆ ಬೆಳೆಗಳಿಗೆ ವಿಜಯಪುರ ಜಿಲ್ಲೆಯು ಹೆಸರುವಾಸಿಯಾಗಿದೆ. ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳಿಗೆ ಇನ್ನಷ್ಟು ಉತ್ತೇಜನ ನೀಡಲು ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

ಏಷ್ಯಾದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡು ಮಾರಾಟ ವಹಿವಾಟು ನಡೆಸುವ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿರುವ ರೇಷ್ಮೆ ಮಾರುಕಟ್ಟೆಗಳನ್ನು ಮೊದಲನೇ ಹಂತದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ಮಾರುಕಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ 250 ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್:
ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್​ ನಿರ್ಮಾಣ ಮಾಡಲಾಗುವುದು. ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ, ಬೆಂಗಳೂರು ಗ್ರಾ. ಜಿಲ್ಲೆ ಮೂಗೆನಹಳ್ಳಿ ಬಳಿ ಆಹಾರ ಪಾರ್ಕ್​ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಬೆಂಗಳೂರು ಬಿಸಿನೆಸ್ ಕಾರಿಡರ್ ರೂಪಿಸಲು ಬಜೆಟ್‌ನಲ್ಲಿ ನಿರ್ಧಾರ:
ಬೆಂಗಳೂರು ಬಿಸಿನೆಸ್ ಕಾರಿಡರ್ ರೂಪಿಸಲು ಬಜೆಟ್‌ನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. 73 ಕಿ.ಮೀ ಉದ್ದದ ರಸ್ತೆಯನ್ನು 27 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಪಿಪಿಪಿ ಮಾದರಿಯಲ್ಲಿ ಆರ್‌ಎಫ್‌ಪಿ ಕರೆಯಲಾಗುವುದು. ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ ಮಾಡಲಾಗುವುದು. ಬೆಂಗಳೂರಿನಲ್ಲಿ ಆಕರ್ಷಕ ಪ್ರವಾಸಿ ತಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ನಗರಾಭಿವೃದ್ಧಿ ಅಂಗಸಂಸ್ಥೆ ಬಿಬಿಎಂಪಿ, ಬಿಎಂಆರ್‌ಸಿಎಲ್‌, ಬಿಡಬ್ಲ್ಯುಎಸ್‌ಎಸ್‌ಬಿ, ಬಿಡಿಎನಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣ ಮಾಡಲಾಗುವುದು. 2025ರೊಳಗೆ 44 ಕಿ.ಮೀ ಮೆಟ್ರೋ ಮಾರ್ಗ ಸೇರ್ಪಡೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

ಮದ್ಯದ ದರ ಮತ್ತೆ ಹೆಚ್ಚಳ: ಬಜೆಟ್​​ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ
ಮದ್ಯದ ಘೋಷಿತ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML, ಬಿಯರ್‌ ಸ್ಲಾಬ್‌ ಪರಿಷ್ಕರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಿಸಿದರು. 2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ, ಅಬಕಾರಿ ತೆರಿಗೆಯಿಂದ 28,181 ಕೋಟಿ ರೂ.ಗಳು ಸ್ವೀಕೃತವಾಗಿರುತ್ತದೆ. 2024-25ನೇ ಸಾಲಿಗೆ 38,525 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
2023-24ರಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯವು 2ನೇ ಸ್ಥಾನದಲ್ಲಿದೆ. ಜನವರಿ ತಿಂಗಳ ಅಂತ್ಯದವರೆಗು 58,180 ಕೋಟಿ ರೂ.ಗಳ SGST ತೆರಿಗೆ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.14 ರಷ್ಟು ಬೆಳವಣಿಗೆಯಾಗಿರುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಹೆಚ್ಚಳ: ಸಿಎಂ ಸಿದ್ದರಾಮಯ್ಯ
ತೆರಿಗೆ ಸಂಗ್ರಹದಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಹೆಚ್ಚಳವಾಗಿದೆ. ಇದರ ಪರಿಣಾಮ ತೆರಿಗೆ ಸಂಗ್ರಹ ಹೆಚ್ಚಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

Leave a Comment

Your email address will not be published. Required fields are marked *