ಸಮಗ್ರ ನ್ಯೂಸ್: ಬರದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿ ರೈತರು ಕಂಗಾಲಾಗಿರುವ ನಡುವೆಯೇ ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕ ಹೆಚ್ಚಿಸಿರುವುದು ರೈತ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿವಿಧ ಸರ್ಕಾರಿ ಯೋಜನೆಗಳಿಗೆ ಮತ್ತು ಕೃಷಿ ಚಟುವಟಿಕೆಗೆ ಅಗತ್ಯವಿರುವ ಮುಚ್ಚಳಿಕೆ ಪತ್ರ, ಪ್ರಮಾಣಪತ್ರ, ವಿವಿಧ ರೀತಿಯ ಬಾಂಡ್ಗಳನ್ನು ಖರೀದಿಸಲು ದುಪ್ಪಟ್ಟು ಹಣ ಪಾವತಿಸುವ ಅನಿವಾರ್ಯ ರೈತರಿಗೆ ಎದುರಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಸರ್ಕಾರ ಹಲವು ಸ್ಟ್ಯಾಂಪ್ ದರಗಳ ಏರಿಕೆ ಮಾಡಿದ್ದರ ಪರಿಣಾಮ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸಮಸ್ಯೆ ಏನು?: ಕೃಷಿ, ನೀರಾವರಿ, ಕಂದಾಯ ಸೇರಿದಂತೆ ಇತರೆ ಇಲಾಖೆಗಳ ಫಲಾನುಭವಿಯಾಗಲು, ಸಬ್ಸಿಡಿ ಪಡೆಯಲು ಮತ್ತು ಹೊಲ-ಗದ್ದೆಯನ್ನು ಸಹೋದರ ಸಂಬಂಧಿಕರ ನಡುವೆ ಇಬ್ಭಾಗ ಮಾಡಿಕೊಳ್ಳಲು ರೈತರು ವಿವಿಧ ರೀತಿಯ ವ್ಯವಹಾರಕ್ಕೆ ವಿವಿಧ ಇಲಾಖೆಗೆ ಬಾಂಡ್, ಮುಚ್ಚಳಿಕೆ ಪತ್ರ, ಪ್ರಮಾಣಪತ್ರ ಸಲ್ಲಿಸಬೇಕು. ಮೊದಲೇ ಬರದ ಹಿನ್ನೆಲೆಯಲ್ಲಿ ರೈತರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ನಡುವೆ ಸ್ಟಾಂಪ್ ದರಗಳನ್ನು ಸರ್ಕಾರ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಹಿಸ್ಸಾ ದುಪ್ಪಟ್ಟು: ರೈತರು ಹೊಲ-ಗದ್ದೆಗಳ ಪಾಲುದಾರಿಕೆ ಪಡೆಯಲು ಈ ಮೊದಲು ಎಕರೆ ಲೆಕ್ಕದಲ್ಲಿ 200 ರೂ. ನಿಂದ 1000 ರೂ. ವರೆಗೆ ಸ್ಟಾಂಪ್ ಶುಲ್ಕ ಪಾವತಿಸಬೇಕಿತ್ತು. ಈಗ ಪ್ರತಿ ಹಿಸ್ಸಾಗೆ (ಪ್ರತಿ ಪಾಲುದಾರಿಕೆ) 1,000 ರೂ. ನಿಂದ 5,000 ರೂ. ವರೆಗೆ ಪಾವತಿಸಬೇಕಿದೆ. ಈ ಶುಲ್ಕದಲ್ಲಿ ಶೇ.20 ರಷ್ಟು ಏರಿಕೆ ಆಗಿದೆ.
ದರ ದುಪ್ಪಟ್ಟು: ಸಾಮಾನ್ಯ ಅಫಿಡವಿಟ್ ಪಡೆಯಲು ಈ ಮೊದಲು 20 ರೂ. ಸ್ಟಾಂಪ್ ಬಳಸಲಾಗುತ್ತಿತ್ತು. ಹೊಸ ದರದ ಅನ್ವಯ 100 ರೂ. ಸ್ಟ್ಯಾಂಪ್ ಕಡ್ಡಾಯವಾಗಿದೆ. ಕೃಷಿ, ಕಂದಾಯ, ಶಿಕ್ಷಣ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸ್ಟ್ಯಾಂಪ್ ಬಳಕೆಯಾಗುತ್ತಿದ್ದು, ವಿಶೇಷವಾಗಿ ಕೃಷಿ ಇಲಾಖೆಯಲ್ಲಿ ರೈತರು ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು ಮುಚ್ಚಳಿಕೆ ಪತ್ರ ನೀಡುವುದು ಕಡ್ಡಾಯ. ರಾಶಿ ಯಂತ್ರ, ಬಿತ್ತುವ ಕೂರಗಿ, ನೇಗಿಲು ಸೇರಿದಂತೆ ವಿವಿಧ ಪರಿಕರಗಳನ್ನು ಸಹಾಯ ಧನದಲ್ಲಿ ಪಡೆಯಲು 20 ರೂ. ಬದಲಾಗಿದೆ 100 ರೂ. ಸ್ಟಾಂಪ್ (ನೋಟರಿ) ಮಾಡಿಸಬೇಕಿದೆ. ಜಮೀನಿನ ಖರೀದಿ, ವಚನಪತ್ರಗಳಿಗೆ ಜಮೀನಿನ ಮೂಲ ಮಾರುಕಟ್ಟೆ ದರಕ್ಕೆ ಶೇ.01 ರಷ್ಟು ಭರಿಸಬೇಕಿದ್ದ ದರವನ್ನು ಈಗ ಶೇ 0.5ರಷ್ಟು ಭರಿಸಬೇಕಿದೆ. ಈ ಬೆಲೆ ಲಕ್ಷಕ್ಕೂ ಅಧಿಕವಾಗುವುದರಿಂದ ರೈತರು ಸೇರಿದಂತೆ ಎಲ್ಲ ವರ್ಗಕ್ಕೂ ಹೊರೆ ಆಗಲಿದೆ. ವಿವಿಧ ಪ್ರಾಧಿಕಾರದಿಂದ ಕೇಳಲ್ಪಡುವ ಮುಚ್ಚಳಿಕೆ ಪತ್ರ, ದತ್ತಕ ಪತ್ರ, ಜನನ ಪ್ರಮಾಣಪತ್ರ, ಮೂಲ ದಾಖಲೆ ಪಡೆಯಲು. ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲು ಇನ್ಮುಂದೆ 100 ರೂ. ಸ್ಟಾಂಪ್ ಕಡ್ಡಾಯ.