ಸಮಗ್ರ ನ್ಯೂಸ್: ಇಂದಿನಿಂದ ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಫೆಬ್ರವರಿ 23ರವರೆಗೂ ಅಧಿವೇಶನ ನಡೆಯಲಿದ್ದು,ರಾಜ್ಯದ ಜನರ ನಿರೀಕ್ಷೆಯೂ ಹೆಚ್ಚಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೆ ಕೇಂದ್ರದ ಬಜೆಟ್ ಮಂಡನೆಯಾಗಿದೆ. ಅನುದಾನ ತಾರತಮ್ಯ ವಿಚಾರಕ್ಕೆ ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದರು.
ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲು ನೀಡಿಲ್ಲ ಎಂದು ಕೈ ನಾಯಕರು ದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ತೆರಿಗೆ ವಿಚಾರಕ್ಕೆ ವಾಗ್ವಾದ ಮುಂದುವರಿದಿರುವ ಬೆನ್ನಲ್ಲೇ ರಾಜ್ಯದಲ್ಲಿ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಇದರೊಂದಿಗೆ ಮತ್ತೊಂದು ಸುತ್ತಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಹೊಸ ಸರ್ಕಾರ ಬಂದಾಗಿನಿಂದ ಇಲ್ಲಿಯವರೆಗೆ ಆಗಿರುವ ಪ್ರಗತಿ, ಗ್ಯಾರಂಟಿ ಅನುಷ್ಠಾನ ಹಾಗೂ ಮುನ್ನೋಟವನ್ನು ನೀಡಲಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಬಿಜೆಪಿ ಪ್ರಮುಖ ಅಸ್ತ್ರಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಕಾಂಗ್ರೆಸ್ ಪರವಾಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಆರೋಪ ಮಾಡಿದ್ದಾರೆ. ಇನ್ನು ಮಂಡ್ಯದ ಹನುಮ ಧ್ವಜ ಪ್ರಕರಣ, ಹಾನಗಲ್ ಅತ್ಯಾಚಾರ ಕೇಸ್ ಸೇರಿ ವಿವಿಧ ಪ್ರಕರಣಗಳನ್ನು ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯವನ್ನೂ ಬಿಜೆಪಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಸಮರ್ಪಕವಾಗಿ ಬರ ಪರಿಹಾರ ಬಿಡುಗಡೆ ಆಗದೇ ಇರುವುದು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ,ಕುಡಿಯುವ ನೀರಿನ ಸಮಸ್ಯೆ. ಲ್ಯಾಪ್‌ಟಾಪ್ ಖರೀದಿ ಅಕ್ರಮ, ಗ್ರಂಥಾಲಯ ಇಲಾಖೆ ಕರ್ಮಕಾಂಡ. ಕೆಪಿಎಸ್‌ಸಿ ಅಧ್ಯಕ್ಷರು, ಕಾರ್ಯದರ್ಶಿ ನಡುವಿನ ಕಿತ್ತಾಟ. ತಡೆಯಾಗಿರುವ ನೇಮಕ ಪ್ರಕ್ರಿಯೆ ಮತ್ತು ಪರಿಣಾಮಗಳು. ಮುಸ್ಲಿಮರ ತುಷ್ಟೀಕರಣ, ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊರತೆ ವಿಚಾರ ಮುಂದಿಟ್ಟು ಬಿಜೆಪಿ ವಾಕ್ ಸಮರ ನಡೆಸುವ ಸಾಧ್ಯತೆಯಿದೆ.