ಸಮಗ್ರ ನ್ಯೂಸ್: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಪಣೋಲಿ ಬೈಲ್‌ನಲ್ಲಿ ನಡೆದ ತುಳುನಾಡಿನ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲದಲ್ಲಿ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರು ಭಾಗವಹಿಸಿ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಆಶೀರ್ವಾದ ಪಡೆದರು.
ದೈವಗಳ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್ ವಿರುದ್ಧ ಮುಸ್ಲಿಂ ಮುಖಂಡನೋರ್ವ ವಿರೋಧ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಎಂಬುವವರು ಯು.ಟಿ. ಖಾದರ್ ಬಗ್ಗೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಕೊರಗಜ್ಜನ ಭಕ್ತ ಯು.ಟಿ ಖಾದರ್ ನನ್ನು ಮುಸ್ಲಿಮರು ಬರೀ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಖಂಡರಾಗಿ ಕಾಣುವುದು ಬೇಡ. ಉಲೆಮಾ, ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಮುಸ್ಲಿಂ ನಾಯಕನಾಗಿ ಹತ್ತಿಸುವುದು ತರವಲ್ಲ. ಅದು ಆತನ ಭೂತಾರಾಧನೆಗೆ ನಾವು ಕೊಡುವ ಅಂಗೀಕಾರವಾಗಿತ್ತೆ. ಖಾದರ್ ಕೊರಗಜ್ಜನಿಗೂ ಕಲ್ಲುರ್ಟಿ, ಪಂಜುರ್ಲಿಗೂ ಆರಾಧಿಸಲಿ. ಪ್ರಸಾದ ಪಡೆದು ತಲೆಗೆ ಮತ್ತಿಕೊಂಡು ನರಕಕ್ಕೆ ಹೋಗಲಿ. ಅದು ಆತನ ವೈಯಕ್ತಿಕ ಸ್ವತಂತ್ರ. ಅದು ಭಾರತದಲ್ಲಿ ಎಲ್ಲರಿಗೂ ಇರುವ ಸಂವಿಧಾನಿಕ ಸ್ವಾತಂತ್ರ. ಅದನ್ನು ತಡೆಯುವ ಹಕ್ಕು ನನಗಿಲ್ಲ. ಆದರೆ ಧಾರ್ಮಿಕ ನಾಯಕನಾಗಿ ನಾವು ಅಂಗೀಕರಿಸುವುದು, ಆತನ ಭೂತಾರಾಧನೆಯನ್ನು ನಾವು ಒಪ್ಪಿಕೊಂಡಂತಾಗುತ್ತದೆ. ಉಲಮಾಗಳು ಅವನಿಗೆ ಗೌರವ ಕೊಡುವುದು ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಸಂದೇಶವಾಗಿ ಪರಿಣಮಿಸುತ್ತದೆ ಎಂದು ಯು.ಟಿ.ಖಾದರ್ ನಡವಳಿಕೆ ಆಕ್ಷೇಪಿಸಿ ಸಾಲೆತ್ತೂರು ಫೈಝಿ ಪೋಸ್ಟ್ ಹಂಚಿಕೊಂಡಿದ್ದಾರೆ.