ಸಮಗ್ರ ನ್ಯೂಸ್: ಅಬ್ಬಬ್ಬಾ ಈ ವಿಡಿಯೋ ನೋಡಿದ್ರೆ ನೀವು ಭಯ ಪಡ್ತಿರಾ.. ಹೌದು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ಪ್ರವಾಸಿಗರನ್ನು ಆನೆಯೊಂದು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಮತ್ತು ಮೂಲೆಹೊಳೆ ನಡುವೆ ಈ ಘಟನೆ ನಡೆದಿದೆ. ಇಬ್ಬರು ಪ್ರವಾಸಿಗರು ಆನೆಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ, ಓರ್ವ ಕೆಳಗೆ ಬಿದ್ದಿದ್ದಾನೆ. ಕೂಡಲೆ ವ್ಯಕ್ತಿ ಪಕ್ಕಕ್ಕೆ ಸರಿದಿದ್ದು, ಅದೃಷ್ಟವಶಾತ್ ಆನೆ ತುಳಿತದಿಂದ ತಪ್ಪಿಸಿಕೊಂಡಿದ್ದಾನೆ.
ಪ್ರಾಣಿಗಳ ದಾಳಿಯನ್ನು ತಪ್ಪಿಸಲು ಅರಣ್ಯ ಇಲಾಖೆಯು ಅರಣ್ಯದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಿದೆ. ಆದರು ಕೂಡ ಕೇರಳದಿಂದ ಕರ್ನಾಟಕಕ್ಕೆ ಬರುವ ಮಾರ್ಗದಲ್ಲಿ ಇಬ್ಬರು ವ್ಯಕ್ತಿಗಳು ಚಿತ್ರ ತೆಗೆಯಲು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾರಿನಿಂದ ಕೆಳಗೆ ಇಳಿದಿದ್ದಾರೆ. ಕೆಳಗೆ ಇಳಿದು ಸೆರೆ ಹಿಡಿಯುವಾಗ ಆನೆ ಪ್ರತ್ಯಕ್ಷವಾಗಿದ್ದು, ಇಬ್ಬರನ್ನು ಅಟ್ಟಿಸಿಕೊಂಡು ಬಂದಿದೆ. ಆನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಲು ಆರಂಭಿಸಿದ್ದಾರೆ. ಓಡುವಾಗ ಓರ್ವ ವ್ಯಕ್ತಿ ಕೆಳಗೆ ಬಿದ್ದಿದ್ದಾನೆ. ಆನೆ ಆತನನ್ನು ಸೊಂಡಿಲಿನಿಂದ ತಿವಿದಿದ್ದು, ವ್ಯಕ್ತಿ ಪಕ್ಕದಲ್ಲಿರುವ ಮರದ ಹಿಂದೆ ಅವಿತುಕೊಂಡಿದ್ದಾನೆ. ನಂತರ ಆನೆ ಕಾಡಿನೊಳಗೆ ಹೋಗಿದೆ.
ಈ ಘಟನೆಯನ್ನು ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಇನ್ನೂ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಘಟನೆ ಯಾವಾಗ ನಡೆದಿದೆ ಎಂಬುದನ್ನು ಪತ್ತೆ ಹಚ್ಚಲು ಅರಣ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿದ ಚಾಲಕ ಹಾಗೂ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.