ಸಮಗ್ರ ನ್ಯೂಸ್: ಶ್ರೀರಾಮನ ಕಟೌಟ್ ಬಿದ್ದು ಪಾದಚಾರಿಗೆ ಗಾಯವಾದ ಘಟನೆ ಬೆಂಗಳೂರಿನ HAL ರಸ್ತೆಯಲ್ಲಿ ನಡೆದಿದೆ.
ಶ್ರೀರಾಮ ಮಂದಿರ ಉದ್ಘಾಟನೆ ದಿನದಂದು ಹೆಚ್ಎಎಲ್ ವಿಮಾನ ನಿಲ್ದಾಣದ ಪಕ್ಕದಲ್ಲೆ ಶ್ರೀರಾಮನ ಬೃಹತ್ ಕಟೌಟ್ ಹಾಕಲಾಗಿತ್ತು. ಆದರೆ, ಕಾರ್ಯಕ್ರಮ ಮುಗಿದು 10 ದಿನಗಳಾದರೂ ಕಟೌಟ್ ತೆರವು ಗೊಳಿಸದ ಹಿನ್ನೆಲೆ ಪಾದಚಾರಿ ಮಾರ್ಗದಲ್ಲಿ ಸಾಗುತ್ತಿದ್ದವರ ಮೇಲೆ ಕಟೌಟ್ ಬಿದ್ದಿದೆ. ಇದರಿಂದ ಮೂರು ಜನ ಪಾದಚಾರಿಗಳಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಟೌಟ್ ಬಿದ್ದ ಸ್ಥಳದಲ್ಲೇ ಖಾಸಗಿ ಶಾಲೆ ಇದ್ದು, ಲಂಚ್ ಬ್ರೇಕ್ ಆರಂಭ ಆಗುವ ಕೆಲವೇ ನಿಮಿಷಗಳ ಹಿಂದಷ್ಟೇ ಬೃಹತ್ ಕಟೌಟ್ ನೆಲಕ್ಕುರುಳಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಇನ್ನು ಕೂಡಲೇ ಕಟೌಟ್ ಅಡಿ ಸಿಲುಕಿದ ಪಾದಚಾರಿಗಳನ್ನು ಸ್ಥಳೀಯರು ಹೊರ ಎಳೆದು, ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಗಾಯಾಳುಗಳನ್ನು ಶಿಫ್ಟ್ ಮಾಡಿದ್ದಾರೆ. ಅಳವಡಿಕೆ ವೇಳೆ ಸರಿಯಾದ ಸುರಕ್ಷತಾ ಕ್ರಮ ಕೈಗೊಳ್ಳದ ಹಿನ್ನೆಲೆ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.