ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 15 ಅಡಿ ಎತ್ತರದ ಕಂಚಿನ ಪ್ರತಿಮೆ ಶೇಷಾದ್ರಿಪುರದಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.
ರಾಜ್ಯದಲ್ಲೇ ಅತಿ ಎತ್ತರದ ರಾಜೀವ್ ಗಾಂಧಿ ಪ್ರತಿಮೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಜಂಕ್ಷನ್‌ಗಳ ಅಭಿವೃದ್ಧಿ ಯೋಜನೆಯಡಿ ಬಿಬಿಎಂಪಿ ನಗರದಲ್ಲಿ 25 ಜಂಕ್ಷನ್‌ಗಳನ್ನು ಅಭಿವೃದ್ಧಿ ಮಾಡುತ್ತಿದ್ದು, ಶೇಷಾದ್ರಿಪುರ, ಪ್ಲಾಟ್‌ಫಾರ್ಮ್ ರಸ್ತೆ ಹಾಗೂ ಸಂಪಿಗೆ ರಸ್ತೆ ಸೇರುವ ಜಂಕ್ಷನ್‌ನಲ್ಲಿ ‘ರಾಜೀವ್ ಗಾಂಧಿ ಸ್ಕ್ವೇರ್’ ನಿರ್ಮಿಸಲಾಗುತ್ತಿದೆ.
‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ಬಿಬಿಎಂಪಿ ವತಿಯಿಂದ ₹1.5 ಕೋಟಿ ವೆಚ್ಚದಲ್ಲಿ ಜಂಕ್ಷನ್ ಅಭಿವೃದ್ಧಿ ಮಾಡಲಾಗುತ್ತಿದೆ. ₹1.25 ಕೋಟಿ ವೆಚ್ಚದಲ್ಲಿ ಸ್ಥಾಪನೆಗೆ ಡಿಸಿಎಂ ತಮ್ಮ ಅನುದಾನದಲ್ಲಿ ಹಣ ಬಿಡುಗಡೆ ಮಾಡಿದ್ದಾರೆ’ ಎಂದು ಬಿಬಿಎಂಪಿಯ ಸಂಚಾರ ಎಂಜಿನಿಯರಿಂಗ್ ಕೋಶದ (ಟಿಇಸಿ) ಎಂಜಿನಿಯರ್‌ಗಳು ತಿಳಿಸಿದರು.
ಆದರೆ ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ರೈತರಿಗೆ ಬರ ಪರಿಹಾರ ಕೊಡಲೂ ಅವರ ಬಳಿ ಹಣವಿಲ್ಲ. ಹೀಗಿರುವಾಗಲೂ ಕೋಟಿಗೂ ಅಧಿಕ ಖರ್ಚು ಮಾಡಿ, ಕರ್ನಾಟಕಕ್ಕೆ ಯಾವುದೇ ಸಂಬಂಧವಿರದ ರಾಜೀವ್ ಗಾಂಧಿ ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಇದಕ್ಕೆ ಕಾಂಗ್ರೆಸ್ಸಿಗರ ಬಳಿ ಉತ್ತರವಿಲ್ಲ. ಸಾರ್ವಜನಿಕ ಸಂಪತ್ತನ್ನು ಗಾಂಧಿ ಕುಟುಂಬದ ಆಸ್ತಿ ಎಂಬಂತೆ ಖರ್ಚು ಮಾಡುವ ಮನಸ್ಥಿತಿಯನ್ನು ಮೊದಲು ಕೆಡವಬೇಕಿದೆ’ ಎಂದು ವಾಗ್ದಾಳಿ ನಡೆಸಿದೆ.