ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಡಿ.ವಿ ಸದಾನಂದಗೌಡ ಬೆಂಗಳೂರಿಗೆ ವಾಪಸ್ ಆಗಿದ್ದು, ಗೌಡರ ಆಗಮನ ಹಿನ್ನೆಲೆಯಲ್ಲಿ ಅವರನ್ನು ನೋಡಿ ಮಾತನಾಡಿಸಲು ಬಿಜೆಪಿ ಕಾರ್ಯಕರ್ತರ ದಂಡು ಡಾಲರ್ಸ್ ಕಾಲೋನಿಯ ಸದಾನಂದಗೌಡರ ನಿವಾಸಕ್ಕೆ ಆಗಮಿಸಿತ್ತು. ನೂರಾರು ಸಂಖ್ಯೆಯ ಕಾರ್ಯಕರ್ತರು ಗೌಡರಿಗೆ ಜೈಕಾರ ಹಾಕಿ, ಮಾಜಿ ಸಚಿವರನ್ನು ಸ್ವಾಗತಿಸಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ಸದಾನಂದಗೌಡರು ಮಾತನಾಡಿದರು.
‘ ನನ್ನ ಮತ್ತು ಪಕ್ಷದ ಕಾರ್ಯಕರ್ತರ ಸಂಬಂಧ ಎಲ್ಲೆ ಇದ್ರು ನಾವೆಲ್ಲರೂ ಒಟ್ಟಾಗಿ ಇದ್ದೇವೆ ಎಂಬ ಸಂದೇಶ ಇದು. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು ಪಕ್ಷಕ್ಕೆ ತೊಡಗಿಸಿಕೊಳ್ತೇನೆ ಎಂದಿದ್ರು. ಆ ಕಾರಣಕ್ಕೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯೇ ನನ್ನ ಗುರಿ ಎಂದಿದ್ದಾರೆ.
ಪಕ್ಷ ಸಂಘಟನೆಯ ಹುಮ್ಮಸ್ಸಿನಲ್ಲಿರುವ ನಿಮಗೆ ಮುಂದೆ ಛಾನ್ಸ್ ಕೊಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗೌಡರು, ನನ್ನದು ಕೆಲಸ ಮಾತ್ರ, ಮಿಕ್ಕಿದ್ದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾನೊಬ್ಬ ನಿಷ್ಟಾವಂತ ಕಾರ್ಯಕರ್ತ ಅಷ್ಟೇ’ ಎಂದಿದ್ದಾರೆ.
ಈ ನಡುವೆ ಅಭಿಮಾನಿಗಳು ‘ಮುಂದಿನ ಮುಖ್ಯಮಂತ್ರಿ ಸದಾನಂದಗೌಡ’ ಎಂಬ ಘೋಷಣೆ ಕೂಗಿದ್ರು. ಆ ವೇಳೆ ಗೌಡರು ‘ಇದು ಅಭಿಮಾನಿಗಳ ಅಭಿಪ್ರಾಯ. ಇದನ್ನು ನಾನು ಹೇಳಿಸಿದ್ದು ಅಲ್ಲ ಎಂದಿದ್ದಾರೆ. ನನ್ನ ವಿರುದ್ದ ಯಾವುದೇ ಕಳಂಕ ಬಂದರೂ ಅದಕ್ಕೆಲ್ಲಾ ನಾನು ವಿಚಲಿತನಾಗೋದಿಲ್ಲ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ವಾರ್ಡ್ಗಳಿಗೆ ಬರುತ್ತೇನೆ. ಈ ಲೋಕಸಭಾ ಕ್ಷೇತ್ರದಲ್ಲಿರುವ ಎಲ್ಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲೇಬೇಕು. ಇದು ನನ್ನ ಅಂತರಾಳ ಮಾತು ಎಂದಿದ್ದಾರೆ. ನಾವೆಲ್ಲರೂ ಒಟ್ಟಾಗಿ ಹೋಗೋಣ, ಸಮರ್ಥವಾಗಿ ಪಕ್ಷ ಸಂಘಟಿಸಿ, ಮುಂದೆ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.
ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಸುಮಾರು 27 ವರ್ಷಗಳಿಂದ ಪಕ್ಷದ ಜವಾಬ್ದಾರಿಯಲ್ಲಿದ್ದೇನೆ. ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ರಾಷ್ಟ್ರೀಯ ಅಧ್ಯಕ್ಷರು ಪಕ್ಷ ಸಂಘಟನೆ ಮಾಡಿ ಎಂದು ಹೇಳಿದ್ದು, ನಾನು ಯಾವುದೇ ಜವಾಬ್ದಾರಿ ನಿರೀಕ್ಷೆ ಮಾಡಿಲ್ಲ, ಮುಂದೆಯೂ ಮಾಡೋದಿಲ್ಲ ಎಂದಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಹೇಳಿದಂತೆ ನಾನು ನಡೆಯುತ್ತೇನೆ ಎಂದಿದ್ದಾರೆ. ರಾಜ್ಯ ರಾಜಕಾರಣಕ್ಕೆ ಮತ್ತೆ ಮರಳುತ್ತೀರಾ ಎಂಬ ಪ್ರಶ್ನೆಗೆ..? ನನಗೆ ಹಿಂದೆ ಸಿಎಂ ಅಗಲು ಆಸಕ್ತಿ ಇರಲಿಲ್ಲ. ನಾನು ಉನ್ನತ ಹುದ್ದೆಗೆ ಹೋದಾಗಲು ಗೆದ್ದು ಬೀಗಿಲ್ಲ, ಅಥವಾ ಕೆಳಗೆ ಹೋದಾಗಲು ಕೊರಗಿದವನಲ್ಲ. ಈ ಹಿಂದೆ ನಾನು ಮಾನ ಅಪಮಾನ ಎಲ್ಲವನ್ನೂ ಕಂಡಿದ್ದವನು. ಪಕ್ಷ ಮಾತ್ರ ನನ್ನನ್ನು ಯಾವತ್ತು ಕೈ ಬಿಟ್ಟಿಲ್ಲ. ಹೀಗಾಗಿ ವರಿಷ್ಠರ ಸೂಚನೆ ಯಂತೆ ನಾನು ಮುಂದೆ ನಡೆಯುತ್ತೇನೆ ಎಂದಿದ್ದಾರೆ.