ಬೆಂಗಳೂರು: ಮಂಡ್ಯ ಜಿಲ್ಲೆ ಕೆ.ಆರ್.ಎಸ್ ಸುತ್ತಮುತ್ತ ಸುಮಾರು 40ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇವುಗಳ ಸಂಪೂರ್ಣ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟು ಮಾತ್ರವಲ್ಲದೆ, ರೈತರ ಜನ ಜೀವನಕ್ಕೂ ತೊಂದರೆ ಆಗಿದೆ. ಈ ಅಕ್ರಮ ದಂಧೆಯ ಸಂಪೂರ್ಣ ದಾಖಲೆಗಳನ್ನು ಮುಂದಿನ ವಾರ ಬಹಿರಂಗಪಡಿಸುವುದಾಗಿ ಅವರು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಬ್ಬ ವ್ಯಕ್ತಿ ಒಂದು ಗಣಿಗೆ ಪರವಾನಗಿ ಪಡೆದು 8-10 ಅಕ್ರಮ ಗಣಿ ನಡೆಸುತ್ತಾನೆ. ಇದರಲ್ಲಿ ರಾಜಕಾರಣಿಗಳೂ ಇದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಮುಖ್ಯಮಂತ್ರಿ ಮತ್ತು ಗಣಿ ಸಚಿವರಿಗೆ ಸಲ್ಲಿಸುವುದಾಗಿ ತಿಳಿಸಿದರು.
ಗಣಗಾರಿಕೆಯಿಂದ ಜಾನುವಾರುಗಳು, ಕೃಷಿ ಹಾಗೂ ಪರಿಸರಕ್ಕೆ ಹಾನಿಯುಂಟಾಗುತ್ತಿದ್ದು, ಸರ್ಕಾರ ಅಕ್ರಮಕ್ಕೆ ಅವಕಾಶ ನೀಡಬಾರದು, ಅಕ್ರಮ ಗಣಿಗಾರಿಕೆಗೆ ಕಣ್ಣು ಮುಚ್ಚಿಕೊಂಡು ಅಥವಾ ಯಾವುದೋ ಪ್ರಭಾವಕ್ಕೆ ಮಣಿದು ಸುಮ್ಮನಾದರೆ ಭವಿಷ್ಯದಲ್ಲಿ ಅಣೆಕಟ್ಟಿಗೆ ಅಪಾಯ ತಪ್ಪಿದ್ದಲ್ಲ. ಮೈಸೂರು ಮಹಾರಾಜರು ಕಟ್ಟಿಸಿದ ಅಣೆಕಟ್ಟಿಗೆ ಗಂಡಾಂತರ ಬರಬಹುದು ಎಂದು ಅಶ್ವತ್ಥನಾರಾಯಣ ಆತಂಕ ವ್ಯಕ್ತಪಡಿಸಿದರು.