ಸಮಗ್ರ ನ್ಯೂಸ್: ಮದುವೆಯಾದ ಬಳಿಕ ಹನಿಮೂನ್‌ಗೆ ಹೋಗಬೇಕಿದ್ದ ನವದಂಪತಿ ತಮ್ಮೂರಿನ ಬೀಚ್ ಸ್ವಚ್ಛಗೊಳಿಸಿ ಮಾದರಿಯಾಗಿದ್ದರು. ಇವರ ಈ ಕಾರ್ಯಕ್ಕೆ ಮೆಚ್ಚಿದ ಪ್ರಧಾನಿ ನರೆಂಂದ್ರ ಮೋದಿಯವರು ಮನ್ ಕಿ ಬಾತ್‌ನಲ್ಲಿ ಉಲ್ಲೇಖಿ ಶ್ಲಾಘಿಸಿದ್ದರು. ಇದೀಗ ಈ ದಂಪತಿಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಅಪರೂಪದ ಆಹ್ವಾನ ಸಿಕ್ಕಿದೆ.
ನವೆಂಬರ್ 2020ರಲ್ಲಿ ಮದುವೆಯಾದ ಬೈಂದೂರಿನ ಅನುದೀಪ್ ಮತ್ತು ಮಿನುಷಾ ಅವರು ಹನಿಮೂನ್‌ಗೆ ದೂರದ ಊರುಗಳಿಗೆ ತೆರಳುವ ಬದಲು ಸ್ಥಳೀಯ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿ ಸುದ್ದಿಯಾಗಿದ್ದರು. ದಂಪತಿಯ ಈ ಕಾರ್ಯವು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಹೀಗಾಗಿ ಅವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದಂಪತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೀಗ ಅವರು ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಸಲುವಾಗಿ ದೆಹಲಿಗೆ ತೆರಳಿದ್ದಾರೆ.
ಇನ್ನು ಈ ದಂಪತಿ ಜೊತೆಗೆ, ಗಣರಾಜ್ಯೋತ್ಸವದ ಪರೇಡ್‌ಗೆ ಮತ್ತೊಂದು ಗಮನಾರ್ಹ ಆಹ್ವಾನಿತರೆಂದರೆ ಮಣಿಕಂಠ ಅವರು. ಇವರು ಕುಂದಾಪುರದಲ್ಲಿ ಚಪ್ಪಲಿ ಮತ್ತು ಕೊಡೆ ರಿಪೇರಿ ಮಾಡುವ ಸಣ್ಣ ಗೂಡಂಗಡಿ ಇಟ್ಟುಕೊಂಡಿರುವ ಚಮ್ಮಾರ ವೃತ್ತಿಯ ವ್ಯಕ್ತಿ. ಮೂಲತಃ ಭದ್ರಾವತಿಯವರಾದ ಮಣಿಕಂಠ ಅವರು ಕಳೆದ ಹಲವಾರು ದಶಕಗಳಿಂದ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಪುಟ್ಟ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ಸ್ವನಿಧಿ ಸಾಲ ಪಡೆದು ಅಂಗಡಿಯನ್ನು ಅಭಿವೃದ್ಧಿಪಡಿಸಿ ಸಾಲದ ಕಂತುಗಳನ್ನು ಕ್ಲಪ್ತ ಸಮಯಕ್ಕೆ ಪಾವತಿಸಿ ಏಳಿಗೆಯನ್ನು ಕಂಡ ಅವರು ಪ್ರಧಾನಿ ಮೋದಿಯವರ ಗಮನ ಸೆಳೆದಿದ್ದರು.