ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಇದೀಗ ಕಾರ್ಯಕರ್ತನ ಸ್ಥಿತಿ ಗಂಭೀರವಾಗಿದೆ.
ಹಿರ್ಗಾನ ನಿವಾಸಿ ರಾಧಾಕೃಷ್ಣ ಹಲ್ಲೆಗೆ ಒಳಗಾದವರು. ಇವರು ಸೈನಿಕರ ಬಗ್ಗೆ ಫೇಸ್‌ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು ಎಂಬ ಆರೋಪದ ಮೇಲೆ ಠಾಣಾಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಧಾಕೃಷ್ಣ ಎಂಬವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ತನ್ನ ಫೇಸ್ ಬುಕ್ ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಆದರೆ 2020 ಆಗಸ್ಟ್ ನಲ್ಲಿ ರಾಧಾಕೃಷ್ಣ ಅವರ ಫೇಕ್ ಐಡಿ ರಚಿಸಿ ಫೇಕ್ ಐಡಿಯ ಮುಖಾಂತರ ಕೆಲ ಕಿಡಿಗೇಡಿಗಳು ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಬೆಂಗಳೂರು ಠಾಣೆಯಲ್ಲಿ ಖುದ್ದು ರಾಧಾಕೃಷ್ಣ ದೂರು ನೀಡಿದ್ದರು.
ಕೆಲ ದಿನಗಳ ಹಿಂದೆ ಕಾರ್ಕಳ ನಗರ ಠಾಣೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ನಿನ್ನೆ ಪೊಲೀಸ್ ಠಾಣೆಗೆ ರಾಧಾಕೃಷ್ಣನ್ ತೆರಳಿದ್ದಾರೆ. ಈ ವೇಳೆ ಠಾಣಾಧಿಕಾರಿ ದೌರ್ಜನ್ಯ ನಡೆಸಿದ್ದಾರೆ. ಈ ಹಿನ್ನಲೆ ರಾಧಾಕೃಷ್ಣ ಅವರ ಸ್ಥಿತಿ ಗಂಭೀರವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಬಗ್ಗೆ ಮಾಜಿ ಸಿಎಂ ಖಂಡಿಸಿ ಟ್ವೀಟ್ ಮಾಡಿದ್ದು , ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.