ಮಂಗಳೂರು: ಇಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ ಪ್ರೊಫೆಸರ್ ಮತ್ತು ಉಪನ್ಯಾಸಕರನ್ನು ಒಳಗೊಂಡ ಟೆಲಿಗ್ರಾಮ್ ಗ್ರೂಪಿನಲ್ಲಿ ಕೊಡಗು ಮೂಲದ ಪ್ರೊಫೆಸರ್ ಒಬ್ಬರು ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿರುವ ಘಟನೆ ನಡೆದಿದ್ದು, ವಿವಿಯಿಂದ ತನಿಖೆಗೆ ಆದೇಶ ಮಾಡಲಾಗಿದೆ.
ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಮಂಗಳೂರು ವಿವಿಯಿಂದ ಗ್ರೂಪ್ ರಚಿಸಲಾಗಿತ್ತು. ವಾಟ್ಸಪ್ ಮಾದರಿಯದ್ದೇ ಟೆಲಿಗ್ರಾಮ್ ನಲ್ಲಿ ಗ್ರೂಪ್ ರಚಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ ವಿವಿಧ ಕಾಲೇಜುಗಳ ಸಾವಿರಕ್ಕಿಂತಲೂ ಹೆಚ್ಚು ಸದಸ್ಯರನ್ನು ಸೇರಿಸಲಾಗಿತ್ತು. ಗ್ರೂಪಿನಲ್ಲಿ ಕೊಡಗು ಮೂಲದ ಇಂಗ್ಲಿಷ್ ಪ್ರೊಫೆಸರ್ ಒಬ್ಬರು ಬುಧವಾರ ಸಂಜೆ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ವಿವಿ ರಿಜಿಸ್ಟ್ರಾರ್ ಪ್ರೊ.ಪಿ.ಎಲ್.ಧರ್ಮ, ವಿಡಿಯೋ ಅಪ್ಲೋಡ್ ಮಾಡಿದ್ದು ಕೊಡಗಿನ ಪ್ರೊಫೆಸರ್ ನಂಬರಿನಿಂದ ಆಗಿತ್ತು. ಆದರೆ, ಇದನ್ನು ಉದ್ದೇಶಪೂರ್ವಕ ಹಾಕಲಾಗಿತ್ತೇ ಅಥವಾ ಇನ್ನಿತರ ತಾಂತ್ರಿಕ ಕಾರಣಗಳಿಂದ ಗ್ರೂಪಿಗೆ ಪೋಸ್ಟ್ ಆಗಿತ್ತೇ ಎನ್ನುವುದು ತನಿಖೆಯಲ್ಲಿ ತಿಳಿದುಬರಬೇಕು. ಈ ಬಗ್ಗೆ ಸೈಬರ್ ತಜ್ಞರಿಂದ ತನಿಖೆ ನಡೆಸಲಿದ್ದೇವೆ. ತಜ್ಞರ ವರದಿ ಆಧರಿಸಿ, ಪ್ರೊಫೆಸರ್ ಬಳಿ ವಿವರಣೆ ಕೇಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ ಪಾದ್ರಿಯೊಬ್ಬರ ಹೆಸರು ಈ ವಿಚಾರದಲ್ಲಿ ಉಲ್ಲೇಖ ಆಗಿತ್ತು ಎನ್ನಲಾಗಿದೆ. ಪೋಸ್ಟ್ ಬಗ್ಗೆ ಆಕ್ರೋಶ ಕೇಳಿಬರುತ್ತಿದ್ದಂತೆ ಬಳಿಕ ಡಿಲೀಟ್ ಮಾಡಲಾಗಿತ್ತು. ಆದರೆ, ಅಷ್ಟರಲ್ಲಿ ಅದರ ಸ್ಕ್ರೀನ್ ಶಾಟ್ ಬೇರೆ ಗ್ರೂಪ್ ಗಳಲ್ಲಿ ಹರಿದಾಡಿದೆ. ಶಿಕ್ಷಕನ ಹುದ್ದೆಯಲ್ಲಿರುವ ಮಂದಿಯಿಂದ ಈ ರೀತಿಯ ವರ್ತನೆ ನಿರೀಕ್ಷೆ ಮಾಡುವಂಥದ್ದಲ್ಲ. ತಪ್ಪಿತಸ್ಥರ ವಿರುದ್ಧ ಶಿಕ್ಷೆಯಾಗಬೇಕು ಎಂದು ಗ್ರೂಪ್ ಸದಸ್ಯರೊಬ್ಬರು ಹೇಳಿಕೊಂಡಿದ್ದಾರೆ. ಇತರೇ ಗ್ರೂಪ್ ಸದಸ್ಯರು ಕೂಡ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.