ಸಮಗ್ರ ನ್ಯೂಸ್: ಶತಮಾನಗಳ ಬಳಿಕ ನಿರ್ಮಾಣವಾದ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದು, ರಾಮಲಲ್ಲಾ ಪಟ್ಟಾಭಿಷೇಕಕ್ಕೆ ಇಡೀ ಹಿಂದೂ ಹೃದಯಗಳು ಕಾತುರದಿಂದ ಕಾಯುತ್ತಿವೆ. ವಿಶ್ವದಾದ್ಯಂತ ಸಂಭ್ರಮ ಮನೆ ಮಾಡಿದ್ದು, ಮತ್ತೊಂದು ದೀಪಾವಳಿಗೆ ಭಾರತ ಸಜ್ಜಾಗಿದೆ.
‘ಪ್ರಾಣ ಪ್ರತಿಷ್ಠಾ’ ಸಮಾರಂಭವು ಒಂದು ಐತಿಹಾಸಿಕ ಘಟನೆಯಾಗಿದ್ದು, ಇದು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪಂಥಗಳ ಪ್ರತಿನಿಧಿಗಳು ಮತ್ತು ವಿವಿಧ ಹಿನ್ನೆಲೆಯ ಜನರ ಸೆಳೆದಿದೆ.
ಇಡೀ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗುವುದು. ವಿಶೇಷ ಪೂಜೆ, ಭಜನೆ, ಮಂತ್ರ ಪಠಣ, ಪ್ರಸಾದ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರವು 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರದ ಆಯಾಮಗಳೊಂದಿಗೆ ಭವ್ಯವಾದ ವಾಸ್ತುಶಿಲ್ಪದ ಅದ್ಭುತವಾಗಿದೆ. ಇದು 392 ಕಂಬಗಳಿಂದ ಬೆಂಬಲಿತವಾಗಿದೆ ಮತ್ತು 44 ಬಾಗಿಲುಗಳಿಂದ ಅಲಂಕರಿಸಲ್ಪಟ್ಟಿದೆ, ಸ್ತಂಭಗಳು ಮತ್ತು ಗೋಡೆಗಳ ಮೇಲೆ ಹಿಂದೂ ದೇವತೆಗಳು, ದೇವರುಗಳು ಮತ್ತು ದೇವತೆಗಳ ಸಂಕೀರ್ಣವಾದ ಕೆತ್ತನೆಯ ಚಿತ್ರಣಗಳನ್ನು ಒಳಗೊಂಡಿದೆ.
ಇಡೀ ಅಯೋಧ್ಯೆಯು ರಾಮ ಭಕ್ತಿಯಲ್ಲಿ ಮುಳುಗಿರುವಂತೆ ಕಾಣುತ್ತಿದೆ. ದೇಶದ ವಿವಿಧೆಡೆಗಳಿಂದ ಬಂದಿರುವ ಸಾಧುಗಳು ಹಾಗೂ ಭಕ್ತರು ಭಜನೆ ಹಾಡುತ್ತ, ತುಳಸೀದಾಸರು ಬರೆದ ರಾಮಚರಿತಮಾನಸದ ಸಾಲುಗಳನ್ನು ಹೇಳುತ್ತ ನರ್ತಿಸುತ್ತಿರುವ ದೃಶ್ಯ ಇಲ್ಲಿನ ಬೀದಿಗಳಲ್ಲಿ ಕಾಣಿಸುತ್ತಿದೆ.
ಅಯೋಧ್ಯೆಯ ಹಲವು ಕಡೆಗಳಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ಇವು ‘ಜೈ ಸಿಯಾ ರಾಮ್’ ಬರಹದೊಂದಿಗೆ ಜನರನ್ನು ಸ್ವಾಗತಿಸುತ್ತಿವೆ. ‘ಜೈಶ್ರೀರಾಮ್’ ಘೋಷಣೆಯು ಎಲ್ಲೆಡೆ ಕೇಳಿಸುತ್ತಿದೆ. ಅಲ್ಲಲ್ಲಿ ಬೇರೆ ಬೇರೆ ಬಣ್ಣಗಳನ್ನು ಬಳಸಿ ರಂಗೋಲಿ ಬರೆಯಲಾಗಿದೆ. ಇಲ್ಲಿನ ಮನೆಗಳು, ದೇವಸ್ಥಾನಗಳು ಹಾಗೂ ಮಠಗಳ ಮೇಲೆ ಬಣ್ಣಬಣ್ಣದ ದೀಪಗಳನ್ನು ಅಳವಡಿಸಲಾಗಿದ್ದು, ಇಲ್ಲಿ ಈಗ ದೀಪಾವಳಿ ಆಚರಣೆ ನಡೆದಿದೆಯೇನೋ ಅನಿಸುವಂತಿದೆ.