ಸಮಗ್ರ ನ್ಯೂಸ್: ಸುಳ್ಯದ ಐವರ್ನಾಡು ದೇರಾಜೆ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಈ ರಸ್ತೆ ಕೂಡಲೇ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ ಐವರ್ನಾಡು ಗ್ರಾ.ಪಂ. ಮುಂಭಾಗ ಇಂದು (ಜ.20) ಬೃಹತ್ ಪ್ರತಿಭಟನೆ ನಡೆಯಿತು.
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ದ್ವಾರದಿಂದ ಪ್ರತಿಭಟನೆ ನಡೆಸುತ್ತಾ ಬಂದ ಪ್ರತಿಭಟನಕಾರರು ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗಿದರು. ಬಳಿಕ ಗ್ರಾ.ಪಂ. ಎದುರುಗಡೆ ಪ್ರತಿಭಟನೆಯನ್ನುದ್ದೇಶಿಸಿ ಅಜಿತ್ ಐವರ್ನಾಡು, ಅಶೋಕ್ ಎಡಮಲೆ, ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡರು ಮಾತನಾಡಿ ಧಾರ್ಮಿಕ ಸ್ಥಳಕ್ಕೆ ಹೋಗುವ ರಸ್ತೆ ತೀರಾ ಹೊಂಡ ಗುಂಡಿಗಳಿಂದ ಕೂಡಿದೆ. ಜನಪ್ರತಿನಿಧಿಗಳು, ಲಕ್ಷಕೋಟಿಯ ಆಶ್ವಾಸನೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ರಸ್ತೆ ಅಭಿವೃದ್ದಿ ಮಾಡಿಲ್ಲ ಎಂದು ಹೇಳಿದರು.
ಐವರ್ನಾಡಿನ ದೇರಾಜೆ ವಾರ್ಡಿನ ಸದಸ್ಯರು ಮತ್ತು ಗ್ರಾಮಸ್ಥರು ತೆರಿಗೆ ಕಟ್ಟುವುದಕ್ಕೆ ಹಿಂದೇಟು ಕೊಡುವುದಾಗಿ, ಮತ್ತು ಪ್ರತಿಭಟನೆ ಕೇವಲ ಸಾಂಕೇತಿಕ, ಮುಂದೆ ರಸ್ತೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ನಾಗರಿಕ ಸೇವಾ ಸಮಿತಿ ಹಾಗೂ ಗ್ರಾಮದ ನಾಗರಿಕರು ಪಾಲ್ಗೊಂಡಿದ್ದರು.