ಸಮಗ್ರ ನ್ಯೂಸ್: ಜನವರಿ 22ರಂದು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರವನ್ನು ನಡೆಸುವಂತೆ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್)ನ ಪ್ರಧಾನ ಕಾರ್ಯದರ್ಶಿ ಡಿ. ಶಶಿ ಕುಮಾರ್ ಖಾಸಗಿ ಶಾಲೆಗಳಿಗೆ ಸಲಹೆ ನೀಡಿದ್ದಾರೆ.
ಒಕ್ಕೂಟದ ಎಲ್ಲ ಸದಸ್ಯರು ಧಾರ್ಮಿಕ ಮನೋಭಾವವನ್ನು ಮಕ್ಕಳಿಗೆ ತಿಳಿಸುವ ಹಿನ್ನೆಲೆಯಲ್ಲಿ ಆಯಾ ಶಾಲೆಯಲ್ಲಿ ತಮ್ಮಲ್ಲಿರುವ ಲಭ್ಯ ವ್ಯವಸ್ಥೆಗೆ ಅನುಗುಣವಾಗಿ ಒಂದೂವರೆ ಘಂಟೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಬೇಕು. ಹೈಬ್ರಿಡ್ ಮಾದರಿಯಲ್ಲಿ ಪಾಠ ಮಾಡುತ್ತಿರುವ ಶಾಲೆಗಳು ತಮ್ಮ ತರಗತಿಯಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ತಾಂತ್ರಿಕ ವ್ಯವಸ್ಥೆಯಲ್ಲಿ ನೇರ ಪ್ರಸಾರದಲ್ಲಿ ತೋರಿಸಬಹುದಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಜನವರಿ 22 ರಂದು ಸಾರ್ವತ್ರಿಕ ರಜೆ ಕೊಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಒಂದು ವೇಳೆ ರಜೆ ನೀಡಿದರೆ ವಿದ್ಯಾರ್ಥಿಗಳು, ಆಟ ಅಥವಾ ಅನ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ನೋಡದಿರಬಹುದು ಎಂದು ಅವರು ಹೇಳಿದ್ದಾರೆ.