ಸಮಗ್ರ ನ್ಯೂಸ್: ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಹಿನ್ನಲೆ ರಾಮಮಂದಿರದ ಅಕ್ಷತೆ ವಿತರಣೆ ಮಾಡುತ್ತಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಪುತ್ತಿಲ ಪರಿವಾರದ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ಸಿ.ಬಿ ಸ್ಪಷ್ಟನೆ ನೀಡಿದ್ದಾರೆ.
ಘಟನೆ ಪುತ್ತೂರಿನ ಮುಂಡೂರು ಎಂಬಲ್ಲಿ ನಡೆದಿದ್ದು, ಸಂತೋಷ್ ಎಂಬಾತ ಹಲ್ಲೆಗೊಳಗಾದ ಹಿಂದೂ ಸಂಘಟನೆಯ ಕಾರ್ಯಕರ್ತ. ಈತ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತೋಷ್ ಮುಂಡೂರು ಗ್ರಾಮದಲ್ಲಿ ರಾಮಮಂದಿರದ ಅಕ್ಷತೆ ಹಂಚುವ ಜವಾಬ್ದಾರಿ ಹೊತ್ತಿದ್ದರು. ಆದರೆ ಇದಕ್ಕೆ ಸ್ಥಳೀಯ ನಿವಾಸಿಗಳಾದ ಪುತ್ತಿಲ ಪರಿವಾರದ ಬೆಂಬಲಿಗರು ಎನ್ನಲಾದ ಧನಂಜಯ್ ಮತ್ತು ತಂಡ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಅದೇ ದ್ವೇಷದಲ್ಲಿ ಸಂತೋಷ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು.
ಈ ವೇಳೆ ತಡೆಯಲು ಬಂದ ಸಂತೋಷ ತಾಯಿಯ ಮೇಲೂ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಸಂತೋಷ್ ಹಾಗೂ ಅವರ ತಾಯಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುತ್ತೂರಿನ ಮುಂಡೂರು ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಸಿ.ಬಿ.ರಿಷ್ಯಂತ್ ಸ್ಪಷ್ಟನೆ ನೀಡಿದ್ದು, ಈ ಹಲ್ಲೆಗೂ ರಾಮ ಅಕ್ಷತೆ ವಿತರಣೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಮುಂಡೂರಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಅಕ್ಷತೆ ಹಂಚುವ ವಿಚಾರಕ್ಕೆ ನಡೆದ ಹಲ್ಲೆ ಅಲ್ಲ ಅದು ಜಾಗದ ವಿಚಾರಕ್ಕೆ ನಡೆದ ಗಲಾಟೆ ಆಗಿದೆ. ಹಲ್ಲೆ ನಡೆಸಿದವರಿಗೂ, ಹಲ್ಲೆಗೊಳಗಾದ ಸಂತೋಷ್ ಕುಟುಂಬದ ಮಧ್ಯೆ ದಾರಿ ವಿಚಾರವಾಗಿ ವಿವಾದವಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಗಲಾಟೆ ನಡೆದಿದೆ. ಈಗ ಎರಡೂ ಕಡೆಯವರು ದೂರು ನೀಡಿದ್ದಾರೆ. ಎರಡೂ ಕಡೆಯವರ ದೂರಿನಂತೆ ಪ್ರಕರಣ ದಾಖಲಾಗಿದೆ . ಈ ಘಟನೆಯಲ್ಲಿ ಯಾವುದೇ ರಾಜಕೀಯ ದ್ವೇಷ ಅಥವಾ ಅಕ್ಷತೆಯ ವಿಚಾರವಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.