ಸಮಗ್ರ ನ್ಯೂಸ್: ಮುಸ್ಲಿಂ ಕುಟುಂಬವೊಂದು ಶಬರಿಮಲೆ ತೀರ್ಥಯಾತ್ರಿಗಳಿಗೆ ಅನ್ನಸಂತರ್ಪಣೆ ಆಯೋಜಿಸಿ ಧಾರ್ಮಿಕ ಸೌಹಾರ್ದತೆ ಮೆರೆದಿರುವ ಸುದ್ದಿಯೊಂದು ಕೊಪ್ಪಳದ ಜಯನಗರದಿಂದ ವರದಿಯಾಗಿದೆ. ಈ ಕುರಿತ ಫೋಟೋಗಳು ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜಿಲ್ಲಾ ಪಿಂಜಾರ ಸಮುದಾಯದ ಅಧ್ಯಕ್ಷ ಖಾಶಿಂ ಆಲಿ ಮುದ್ದಬಳ್ಳಿ ಅವರ ನಿವಾಸದಲ್ಲಿಯೇ ಈ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಅಯ್ಯಪ್ಪ ವೃತಧಾರಿಗಳು ಖಾಶಿಂ ಮನೆಯಲ್ಲಿ ಭಜನೆಗಳನ್ನು ಹಾಡಿ ಅಯ್ಯಪ್ಪನನ್ನು ಆರಾಧಿಸಿದರು. ಖಾಶಿಂ ಅವರ ಕುಟುಂಬ ಸದಸ್ಯರೂ ಪಾಲ್ಗೊಂಡರು.
ಎಲ್ಲಾ ಧರ್ಮಗಳೂ ಒಂದೇ ಹಾಗೂ ಎಲ್ಲರೂ ಎಲ್ಲಾ ಧರ್ಮಗಳ ಸಾರವನ್ನು ಅರಿಯಬೇಕು ಎಂದು ಅವರು ಹೇಳಿದರು. ಇತ್ತೀಚೆಗೆ ಉತ್ತರ ಕರ್ನಾಟಕದ ಆರು ಮಂದಿ ಅಯ್ಯಪ್ಪ ವೃತಧಾರಿಗಳು ರಾತ್ರಿ ವೇಳೆ ವನ್ಯಪ್ರಾಣಿಗಳ ಭೀತಿ ಎದುರಿಸಿದಾಗ ಅವರಿಗೆ ಕೊಡಗು ಜಿಲ್ಲೆಯ ಮಸೀದಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.