ಸಮಗ್ರ ನ್ಯೂಸ್: ನಾವು ‘ಯುವನಿಧಿ’ ನಿರುದ್ಯೋಗ ಭತ್ಯೆ ನೀಡುವುದು ಮಾತ್ರವಲ್ಲ, ಯುವಕರಿಗೆ ಅಗತ್ಯ ಕೌಶಲ ಕೊಡಿಸಿ ಉದ್ಯೋಗವನ್ನೂ ನೀಡಲು ಸಂಕಲ್ಪಿಸಿದ್ದೇವೆ. ಈ ಸಂಬಂಧ ಮಹತ್ವದ ಕಾರ್ಯಕ್ರಮ ರೂಪಿಸಿದ್ದು, ನೀತಿಯನ್ನೂ ತರುತ್ತಿದ್ದೇವೆ ಎಂದು ಕೌಶಲಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಸರ್ಕಾರದ ಮಹತ್ವಾಕಾಂಕ್ಷೆಯನ್ನು ಹೊರಗೆಡಹಿದ್ದಾರೆ.
ವಿಜಯವಾಣಿ ಕಚೇರಿಯಲ್ಲಿ ಜ. 6ರಂದು ಆಯೋಜಿಸಿದ್ದ ಸಂವಾದದಲ್ಲಿ ಈ ವಿಚಾರ ತಿಳಿಸಿದರು. ಯುವನಿಧಿ ಯೋಜನೆಗೆ ಸ್ವಾಮಿ ವಿವೇಕಾನಂದರ ಜಯಂತಿ ದಿನವಾದ ಜ.12ರಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುತ್ತಿದೆ. ಸರ್ಕಾರದ ಉದ್ದೇಶ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ಮೂರು ಸಾವಿರ ರೂ. ಕೊಟ್ಟು ಕೈ ತೊಳೆದುಕೊಳ್ಳುವುದಲ್ಲ, ಹಣ ಕೊಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಈ ಯೋಜನೆ ಯಲ್ಲಿ ನೋಂದಣಿ ಆದವರಿಗೆ ಕೌಶಲ ಒದಗಿಸುವ ಪ್ರಯತ್ನ ಮಾಡಲಾಗುತ್ತದೆ. ನಿರುದ್ಯೋಗ ಸವಾಲು ಎದುರಿಸಲು ಯುವನಿಧಿ ಯೋಜನೆಯನ್ನು ಬೆಂಬಲವಾಗಿ ಬಳಸಿಕೊಳ್ಳುತ್ತೇವೆ ಎಂದರು. ಕಲಿಕೆಯೊಂದಿಗೆ ಕೌಶಲ, ಕೌಶಲ ತರಬೇತಿಯೊಂದಿಗೆ ಪ್ಲೇಸ್ವೆುಂಟ್ ನಮ್ಮ ಗುರಿಯಾಗಿದೆ. ಯುವನಿಧಿ ಯೋಜನೆ ಫಲಾನುಭವಿಗಳು ಸರ್ಕಾರದ ಸ್ಕಿಲ್ ಕನೆಕ್ಟ್ ಪೋರ್ಟಲ್ನಲ್ಲಿ ನೋಂದಣಿಯಾಗಿರುತ್ತಾರೆ. ಅವರಿಗೆ ಕೌಶಲ ಕೊಡಿಸಿ, ಉದ್ಯೋಗ ಕೊಡಿಸ ಲಾಗುತ್ತದೆ. ಜತೆಗೆ ಸ್ಕಿಲ್ ಕೌನ್ಸಿಲ್ ರಚಿಸ ಲಾಗಿದ್ದು, ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರದವರು ಅದರಲ್ಲಿ ಇದ್ದಾರೆ. ಬೇರೆ ಯಾವೆಲ್ಲ ಕ್ಷೇತ್ರದಲ್ಲಿ ಕೌಶಲ ನೀಡಬಹುದು ಎಂಬ ಬಗ್ಗೆ ಅವರು ಸಲಹೆ ಕೊಡುತ್ತಿದ್ದಾರೆ. ಸೆಮಿಕಂಡಕ್ಟರ್ ವಲಯದಲ್ಲಿ ದೊಡ್ಡ ಹೂಡಿಕೆ ಬರುತ್ತಿದೆ. ಅದಕ್ಕೂ ತಯಾರಾಗಬೇಕು ಎಂದು ವಿವರಿಸಿದರು.
ನೇಮಕದ ಹೊಣೆಗಾರಿಕೆ:
ಕಂಪನಿಗಳು ತಮ್ಮ ಕಾರ್ಯಕ್ಷೇತ್ರಕ್ಕೆ ಅಗತ್ಯವಾದ ಕೌಶಲ ತರಬೇತಿ ನೀಡುವುದಕ್ಕೆ ಇಲಾಖೆ ಕಾರ್ಯಕ್ರಮ ರೂಪಿಸಿದೆ. ಅದರ ತರಬೇತಿ ಶುಲ್ಕವನ್ನು ಸರ್ಕಾರವೇ ಭರಿಸಲಿದೆ. ಈ ವ್ಯವಸ್ಥೆ ಜಾರಿಗೆ ಈಗಾಗಲೇ ಸಭೆಗಳೂ ಆಗಿವೆೆ. ಮೊದಲು ಪ್ರಾಯೋಗಿಕವಾಗಿ ಕಾರ್ಯಕ್ರಮ ರೂಪುಗೊಳ್ಳಲಿದೆ. ಪ್ರಸ್ತುತ ಕೋರ್ಸ್ ಪೂರ್ಣಗೊಳಿಸಿದವರಿಗೆ ಎಮರ್ಜಿಂಗ್ ಟೆಕ್ನಾಲಜಿ, ಜಾಗತಿಕವಾಗಿ ಅಗತ್ಯವಾದ ಕೌಶಲ ಕೊಡುವ ಅಗತ್ಯವಿದೆ. ಓದುವಾಗಲೇ ಕೌಶಲ ರೂಪಿಸಿಕೊಳ್ಳಬೇಕಿದೆ. ತರಬೇತಿಯೊಂದಿಗೆ ಪ್ಲೇಸ್ವೆುಂಟ್ ಮೀಡಲು ತಲಾ ಹದಿನೈದು ಕಂಪನಿಗಳು ಮುಂದೆ ಬಂದಿವೆ. ಪ್ಲೇಸ್ವೆುಂಟ್ ಖಾತ್ರಿ ಕೊಡುವವರಿಗೆ ಈ ಅವಕಾಶ ಕೊಡಲಾಗುತ್ತದೆ ಎಂದು ಪಾಟೀಲ್ ಹೇಳಿದರು.
ತರಬೇತಿ ಹೇಗಿರುತ್ತದೆ?
ಆಯಾ ಕ್ಷೇತ್ರದ ತಜ್ಞರು ಕೌಶಲ ಕೋರ್ಸ್ಗೆ ಕಾಲಮಿತಿ ನಿಗದಿ ಮಾಡುತ್ತಾರೆ. ಮೂರು ತಿಂಗಳು ಇರಬಹುದು, ಆರು ತಿಂಗಳೂ ಆಗಿರಬಹುದು. ಮೊದಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಕಂಪನಿಯವರೇ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ಕೊಡಬೇಕು, ಸರ್ಕಾರ ವೇದಿಕೆ ಒದಗಿಸಲಿದೆ ಎಂದು ವಿವರಿಸಿದರು. ಹಾಗೇ ನಮ್ಮ ಪಠ್ಯದಲ್ಲಿ ಬದಲಾವಣೆ ಮಾಡುವ ಬಗ್ಗೆಯೂ ಪ್ರಯತ್ನ ನಡೆದಿದೆ. ಉನ್ನತ ಶಿಕ್ಷಣ ಸಚಿವರು ಹಾಗೂ ಐಟಿ-ಬಿಟಿ ಸಚಿವರ ಜತೆ ರ್ಚಚಿಸಲಾಗಿದೆ. ಪಠ್ಯಕ್ರಮದಲ್ಲಿ ಕೌಶಲ ಶಿಕ್ಷಣವನ್ನೂ ನೀಡಲು ಕ್ರಮಕೈಗೊಳ್ಳಲಾಗುತ್ತದೆ ಎಂದರು.
ವಿದೇಶದಲ್ಲಿ ಉದ್ಯೋಗ ಕೊಡಿಸಲು ಕಂಪನಿ:
ರಾಜ್ಯದ ಯುವಜನರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ಸಂಬಂಧ ಸರ್ಕಾರವೇ ಒಂದು ಪ್ಲೇಸ್ವೆುಂಟ್ ಕಂಪನಿ ಹುಟ್ಟುಹಾಕಲು ಬಯಸಿದೆ. ಈ ಸಂಗತಿಯನ್ನು ಹಂಚಿಕೊಂಡ ಶರಣ ಪ್ರಕಾಶ್ ಪಾಟೀಲ, ವಿದೇಶದಲ್ಲಿ ಕೌಶಲಯುತ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಇದೆ. ಅನೇಕ ದೇಶಗಳು ನಮ್ಮತ್ತ ಮುಖಮಾಡಿವೆ. ಇತ್ತೀಚೆಗೆ ಸ್ಲೋವೊಕಿಯಾದವರು ನಮ್ಮಲ್ಲಿಗೆ ಬಂದು ಎರಡು ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಬೇಡಿಕೆ ಇಟ್ಟಿದ್ದರು. ಆ ನಿಟ್ಟಿನಲ್ಲಿ ಕೌಶಲಪೂರಿತ ಉದ್ಯೋಗಿಗಳನ್ನು ತಯಾರು ಮಾಡಲು ನಮ್ಮ ಪ್ರಯತ್ನ ನಡೆದಿದೆ. ವಿದೇಶದಲ್ಲಿ ಕೆಲಸ ಕೊಡಿಸಲು ಕೇರಳದಲ್ಲಿ ಸರ್ಕಾರದ ಕಂಪನಿ ಇದೆ. ಅದೇ ರೀತಿ ಇಲ್ಲೂ ಸ್ಥಾಪನೆ ಮಾಡುವ ಉದ್ದೇಶ ವಿದೆ. ಉದ್ಯೋಗ ಕೊಡಿಸುವ ಜತೆಗೆ ವಿದೇಶದಲ್ಲಿ ಅವರಿಗೆ ಎದುರಾಗುವ ಸಮಸ್ಯೆ, ಸವಾಲಿಗೂ ಈ ಕಂಪನಿ ಪರಿಹಾರ ಒದಗಿಸಲಿದೆ ಎಂದರು.
ಕೌಶಲಕ್ಕೆ ಆದ್ಯತೆ ಏಕೆ?:
ತಮ್ಮಲ್ಲಿ ಖಾಲಿ ಹುದ್ದೆಗಳಿವೆ, ಆದರೆ ಕೌಶಲಯುತ ಮಾನವ ಸಂಪನ್ಮೂಲ ಲಭ್ಯವಾಗುತ್ತಿಲ್ಲ ಎಂದು ಉದ್ಯಮಿಗಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ವಾರ್ಷಿಕ ಒಂದು ಲಕ್ಷ ಇಂಜಿನಿಯರ್ಗಳು ಹೊರಬರುತ್ತಿದ್ದು, ಇದರಲ್ಲಿ ಶೇ.20-25 ಮಂದಿಗೆ ಮಾತ್ರ ಕೆಲಸ ಸಿಗುತ್ತಿದೆ. ಬೇರೆ ಕೋರ್ಸ್ ಪೂರೈಸಿದವರಿಗೆ ಇನ್ನೂ ದೊಡ್ಡ ಸವಾಲಿದೆ. ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸುತ್ತಿದ್ದೇವೆ ಎಂದು ಶರಣ ಪ್ರಕಾಶ್ ಅವರು ತಿಳಿಸಿದರು.
ಜನವರಿ ಅಂತ್ಯಕ್ಕೆ ಉದ್ಯೋಗ ಮೇಳ:
‘ಯುವ ಸಮೃದ್ಧಿ’ ಉದ್ಯೋಗ ಮೇಳವನ್ನು ಬೆಂಗಳೂರಲ್ಲಿ ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ಮಾಡುತ್ತಿದ್ದೇವೆ. ಜಿಲ್ಲೆಗಳಲ್ಲೂ ಮೇಳ ಆಯೋಜಿಸುತ್ತೇವೆ ಎಂದರು.