ಸಮಗ್ರ ನ್ಯೂಸ್: ಇನ್ನೇನು ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಮದುವೆ ಮಂಟಪದಲ್ಲೆ ದೊಡ್ಡ ಹೈಡ್ರಾಮ ನಡೆದು ಹೋಗಿದೆ. ಕೊನೇ ಕ್ಷಣದಲ್ಲಿ ಮದುವೆಯೊಂದು ಮುರಿದುಬಿದ್ದು ವರ ಹಿಂಡಲಗಾ ಜೈಲುಪಾಲಾದ ವಿಚಿತ್ರ ಘಟನೆಯೊಂದು ಬೆಳಗಾವಿಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಅಷ್ಟಕ್ಕೂ ಮದುವೆ ಮುರಿದು ಬೀಳಲು ಕಾರಣವೇನು ಅಂತಿರಾ ಇದೇ ನೋಡಿ ವರದಕ್ಷಿಣೆ ಬೇಡಿಕೆ.
ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಆಯೋಜನೆಯಾಗಿತ್ತು. ಈ ಮದುವೆಯ ನಿಶ್ಚಿತಾರ್ಥ ಸಂದರ್ಭದಲ್ಲಿ 50 ಗ್ರಾಂ ಬಂಗಾರ, ಒಂದು ಲಕ್ಷ ವರೋಪಚಾರ ನೀಡುವ ಮಾತುಕತೆ ನಡೆದಿತ್ತು. ಆದರೆ, ವರನ ಕಡೆಯವರು 100 ಗ್ರಾಂ ಚಿನ್ನ, 10 ಲಕ್ಷ ರೂಪಾಯಿ ವರದಕ್ಷಿಣೆ ನೀಡಲು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ವಧುವಿನ ಕುಟುಂಬದವರು ಒಪ್ಪದ ಕಾರಣ ಮದುವೆ ಆಗಲು ಹಳೆ ಹುಬ್ಬಳ್ಳಿ ನಿವಾಸಿ ವರ ಸಚಿನ್ ಪಾಟೀಲ್ ನಿರಾಕರಿಸಿದ್ದ. ಇದರಿಂದ ಬೇಸತ್ತು ವಧುವಿನ ಕುಟುಂಬಸ್ಥರು ಖಾನಾಪುರ ಪೊಲೀಸರಿಗೆ ದೂರು ನೀಡಿದ್ದರು. ಖಾನಾಪುರ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ವಧು ದೂರು ದಾಖಲಾಗಿತ್ತು.
ವಧುವಿನ ಕುಟುಂಬದವರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಂಡಿರುವ ಪೊಲೀಸರು, ವರ ಸಚಿನ್ ಪಾಟೀಲ್ನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.