ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಈ ವರ್ಷ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಕಳೆದ ವರ್ಷಕ್ಕಿಂತ 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬಂದು ಹೋಗಿದ್ದಾರೆ.
ಹವಾಮಾನ ವೈಪರಿತ್ಯ ಮತ್ತು ರೋಗಬಾಧೆಯಿಂದ ಕಾಫಿ, ಏಲಕ್ಕಿ, ಕಾಳು ಮೆಣಸು, ಅಡಿಕೆ ಬೆಳೆಯ ಇಳುವರಿ ಕಡಿಮೆಯಾಗಿರುವ ಬೆನ್ನಲ್ಲೇ ಜಿಲ್ಲೆಯ ಪ್ರವಾಸೋದ್ಯಮ ಈಗ ಹಿಂದಿಗಿಂತ ಹೆಚ್ಚು ಆಕರ್ಷಣೆ ಪಡೆದುಕೊಳ್ಳುತ್ತಿದೆ. ಮುಗಿಲೆತ್ತರದ ಬೆಟ್ಟಗಳು, ಪ್ರಪಾತಗಳು, ಜಲಪಾತಗಳು, ಹುಲ್ಲುಗಾವಲುಗಳು, ಅವುಗಳ ನಡುವೆ ಇರುವ ದೇಗುಲಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಬರುವ ಪ್ರವಾಸಿಗರಿಗೆ ಆತಿಥ್ಯ ನೀಡುತ್ತಿರುವ ಹೋಟೆಲ್, ಹೋಮ್‌ಸ್ಟೇ ಮತ್ತು ರೆಸಾರ್ಟ್‌ಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಇವು ಕೂಡ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗುತ್ತಿವೆ.
ದಣಿವರಿಯದೆ ಒತ್ತಡದ ಜೀವನದ ನಡುವೆ ಬಿಡುವ ಮಾಡಿಕೊಂಡ ಬರುವ ಪ್ರವಾಸಿಗರಿಗೆ ಹೋಮ್‌ಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ನೀಡುತ್ತಿರುವ ಆತಿಥ್ಯ ಪ್ರವಾಸಿಗರನ್ನು ಜಿಲ್ಲೆಗೆ ಕೈ ಬೀಸಿ ಕರೆತರುತ್ತಿದೆ. ಲಭ್ಯ ಇರುವ ಅಂಕಿ-ಅಂಶಗಳ ಪ್ರಕಾರ ಶೃಂಗೇರಿ, ಹೊರನಾಡು, ಕಳಸ, ಮಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಸಾಲು, ಕೆಮ್ಮಣ್ಣುಗುಂಡಿ ಪ್ರವಾಸಿ ತಾಣಗಳಿಗೆ 2022ನೇ ಸಾಲಿನಲ್ಲಿ 60,73,009 ಪ್ರವಾಸಿಗರು ಭೇಟಿ ನೀಡಿದ್ದರು. ಈ ವರ್ಷ ನವೆಂಬರ್ ಅಂತ್ಯಕ್ಕೆ 67,42,837 ಪ್ರವಾಸಿಗರು ಬಂದು ಹೋಗಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಕನಿಷ್ಠ 11 ಲಕ್ಷ ಪ್ರವಾಸಿಗರು ಬಂದು ಹೋಗಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಂದಾಜಿಸಿದೆ. 78.50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು 2023ರಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದಾರೆ.
ಶೃಂಗೇರಿ, ಹೊರನಾಡು, ಕಳಸ, ಮಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಸಾಲು, ಕೆಮ್ಮಣ್ಣುಗುಂಡಿ ಪ್ರವಾಸಿ ತಾಣಗಳಿಗೆ ಬಂದು ಹೋಗುವ ಪ್ರವಾಸಿಗರ ಸಂಖ್ಯೆಯ ಮಾಹಿತಿಯನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ. ಎತ್ತಿನಭುಜ, ರಾಣಿಝರಿ, ದೇವರಮನೆ, ಅಮೃತೇಶ್ವರ ದೇಗುಲ, ಅಯ್ಯನಕೆರೆ ಸೇರಿ ಮಲೆನಾಡಿನ ಹಲವು ಜಲಪಾತಗಳಿಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆಯ ಲೆಕ್ಕ ಪ್ರವಾಸೋದ್ಯಮ ಇಲಾಖೆ ಬಳಿ ಇಲ್ಲ. ಈ ತಾಣಗಳಿಗೆ ಅದರಲ್ಲೂ ರಾಣಿಝರಿ ಮತ್ತು ಬಂಡಾಜೆ ಜಲಪಾತಕ್ಕೆ ಚಾರಣ ಹೋಗುವ ಜನರು ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲೇ ಭೇಟಿ ನೀಡಿದ್ದಾರೆ.