ಸಮಗ್ರ ನ್ಯೂಸ್: ಕಾರುಗಳಲ್ಲಿ ತೆರಳಿ ಮಂಗಳೂರಿನ ವಿವಿಧ ಕಡೆಗಳಿಂದ ದನಗಳನ್ನು ಕಳವು ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದಿರೆ ಪಡುಕೊಣಾಜೆ ಗ್ರಾಮದ ನೀರಳಿಕೆ ಹೌಸ್‌ನ ಇಮ್ರಾನ್ ಇಬ್ರಾಹಿಂ (24) ಮತ್ತು ಕಲ್ಲಬೆಟ್ಟು ಗ್ರಾಮದ ಗಂಟಲಕಟ್ಟೆ ಮಸೀದಿಯ ಬಳಿಯ ನಾಸಿರ್ ಯಾನೆ ನಾಚಿ (26) ಅವರನ್ನು ಬೆಳಗಿನ ಜಾವ ಸುಮಾರು 3.30ಕ್ಕೆ ಬಜಪೆ ಎಸ್‌ಐ ಕುಮಾರೇಶನ್ ನೇತೃತ್ವದ ತಂಡ ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್‌ಪೋಸ್ಟ್‌ನಲ್ಲಿ ಬಂಧಿಸಿದ್ದಾರೆ.
ಬಂಧಿತರಿಂದ ದನ ಕಳವು ಮಾಡಲು ಬಳಸಿರುವ ಸುಮಾರು 10 ಲಕ್ಷ ರೂ.ಮೌಲ್ಯದ ನೀಲಿ ಬಣ್ಣದ ಸ್ವಿಫ್ಟ್ ಕಾರು, ಬಳಿ ಬಣ್ಣದ ರಿಟ್ಜ್ ಕಾರು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಬಜಪೆ ಠಾಣೆ ನಿರೀಕ್ಷಕರಾದ ಸಂದೀಪ್ ಅವರ ಆದೇಶದಂತೆ ಎಸ್‌ಐ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿ ಗಳು ಬಲೆಗೆ ಬಿದ್ದಿದ್ದಾರೆ.
ಬಡಗ ಎಡಪದವು ಗ್ರಾಮದ ಕಿನ್ನಿಮಜಲು ನಿವಾಸಿ ಚಂದನ್ ಉಪಾಧ್ಯಾಯ ಅವರು ಡಿ. 14 ರಂದು ಬೆಳಗ್ಗೆ ಮೇಯಲು ಬಿಟ್ಟ ದನಗಳ ಪೈಕಿ 2 ಹಸುಗಳು ಮತ್ತು 1 ಕರುವನ್ನು ಯಾರೋ ಕದ್ದು ಕಡಿದು ಮಾಂಸ ಮಾಡಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದ ಆರೋಪಿಗಳೆಂದು ಶಂಕಿಸಲಾದ ತೋಡಾರು, ಹಂಡೇಲು, ಉಳಾಯಿ ಬೆಟ್ಟು ಮತ್ತು ಗಂಟಲಕಟ್ಟೆ ಕಡೆಯ ಕೆಲವರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ.