ಸಮಗ್ರ ನ್ಯೂಸ್: ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ಅವರನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ ಐ)ದ ಅಧ್ಯಕ್ಷತೆಗೆ ಆಯ್ಕೆ ಮಾಡಿರುವುದನ್ನು ಪ್ರತಿಭಟಿಸಿ ನಾನು ಕೂಡ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡುತ್ತೇನೆ ಎಂದು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಗೂಂಗಾ ಪೆಹಲ್ವಾನ್ ಎಂದೂ ಕರೆಯಲ್ಪಡುವ ವೀರೇಂದ್ರ ಸಿಂಗ್ ಯಾದವ್ ಅವರು ಘೋಷಿಸಿದ್ದಾರೆ. 2021 ರಲ್ಲಿ ವೀರೇಂದ್ರ ಸಿಂಗ್ ಯಾದವ್ ಅವರಿಗೆ ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು.
ಈ ಬಗ್ಗೆ ಟ್ವಿಟ್ ಮಾಡಿರುವ ವೀರೇಂದ್ರ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರೇ, ನನ್ನ ಸಹೋದರಿ ಮತ್ತು ದೇಶದ ಸುಪುತ್ರಿಯಾದ ಸಾಕ್ಷಿ ಮಲಿಕ್ ಅವರ ಬಗ್ಗೆ ಹೆಮ್ಮೆಪಡುತ್ತೇನೆ, ಪದ್ಮಶ್ರೀ ಪ್ರಶಸ್ತಿಯನ್ನು ನನ್ನ ಸಹೋದರಿ ಸಾಕ್ಷಿ ಮಲಿಕ್ ಅವರಿಗಾಗಿ ಹಿಂದಿರುಗಿಸುತ್ತೇನೆ. ದೇಶದ ಅಗ್ರ ಕ್ರೀಡಾಪಟುಗಳು ಈ ರೀತಿಯ ನಿರ್ಧಾರ ಕೈಗೊಳ್ಳುವಂತೆ ವಿನಂತಿಸುತ್ತೇನೆ ಎಂದು ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.