ಸಮಗ್ರ ನ್ಯೂಸ್: ದ.ಕ. ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾಗಿರುವ ರಾಧಾಕೃಷ್ಣ ಬೊಳ್ಳೂರು ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಡಿ.21ರಂದು ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುಳ್ಯ ಮಂಡಲದ ಬಿಜೆಪಿ ಪದಾಧಿಕಾರಿಗಳು ಮತ್ತು ಕೋರ್ ಕಮಿಟಿಯ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿ, ಕಾರ್ಯಕರ್ತರ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಈಗ ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಇಲ್ಲ. 9-10 ಜನರ ಕೋರ್ ಕಮಿಟಿಯೇ ಬಿಜೆಪಿ ಎಂಬಂತಾಗಿದೆ. ಈ ರೀತಿಯ ವರ್ತನೆಯಿಂದಾಗಿ ಪಕ್ಷದಲ್ಲಿ ಗುಂಪುಗಳು ನಿರ್ಮಾಣವಾಗಿ ಅದು ಪಂಚಾಯತ್ ಚುನಾವಣೆ, ಸಹಕಾರಿ ಬ್ಯಾಂಕ್ ಚುನಾವಣೆ ಮತ್ತು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗಳಲ್ಲಿ ಬಯಲಾಗಿದೆ ಎಂದು ಬೊಳ್ಳೂರು ಹೇಳಿದರು.
ಕಳೆದ ಸುಮಾರು ಒಂದು ವರ್ಷದಿಂದ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ. ನಾನು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷನಾಗಿದ್ದು, ನನ್ನ ಗ್ರಾಮದಲ್ಲೇ ಪಕ್ಷದ ಸಭೆಗಳು ನಡೆಯುವಾಗ ನನಗೆ ಆಮಂತ್ರಣ ನೀಡುತ್ತಿಲ್ಲ. ಸಭೆ ಆರಂಭವಾದ ಬಳಿಕ ನೆಪ ಮಾತ್ರಕ್ಕೆ ಫೋನ್ ಮಾಡಲಾಗುತ್ತದೆ. ಇದರಿಂದ ಬೇಸರಗೊಂಡು ನಾನು ಸಭೆಗೆ ಹೋಗದಿದ್ದಾಗ ಬೊಳ್ಳೂರು ಪಕ್ಷ ತೊರೆದರೆ, ಪಕ್ಷಕ್ಕೇನು ನಷ್ಟವಿಲ್ಲ ಎಂದು ಹೇಳಿಕೊಂಡು ತಿರುಗುವ ಪ್ರಕರಣಗಳು ನಡೆದಿವೆ. ಈ ಹಿನ್ನಲೆಯಲ್ಲಿ ನಾನು ಬಿಜೆಪಿಗೆ ರಾಜೀನಾಮೆ ನೀಡಲಿದ್ದೇನೆ. ನನ್ನ ಜೊತೆಗೆ ಇನ್ನೂ ಹಲವರು ರಾಜೀನಾಮೆ ನೀಡಲಿದ್ದಾರೆ. ಮಾಜಿ ಸಚಿವ ಎಸ್.ಅಂಗಾರರನ್ನು ಕೂಡ ಕೋರ್ ಕಮಿಟಿಗೆ ಕೂಡ ಸೇರಿಸದೆ ಕಡೆಗಣಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬೊಳ್ಳೂರು ಹೇಳಿದರು.