ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ವಿದ್ಯುತ್ ಅವಘಡ ಮುಗಿಯದ ಕಥೆ, ಮೊನ್ನೆಯಷ್ಟೆ ವಿದ್ಯುತ್ ತಂತಿ ತಗುಲಿ ತಾಯಿ ಮಗು ಸಾವನಪ್ಪಿದ ಘಟನೆ ಸಂಭವಿಸಿದ್ದು ಅದು ಮಾಸುವ ಮುನ್ನವೇ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ.
ಲಗ್ಗೆರೆಯ ಪಾರ್ವತಿಪುರದಲ್ಲಿ ಇಂದು ಮಧ್ಯಾಹ್ನ ವಿದ್ಯುತ್ ವೈರ್ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಕ್ರೇನ್ ಆಪರೇಟರ್ಗೆ ಗೈಡ್ ಮಾಡುತ್ತಿದ್ದ ಜೈನ್ ಕುಮಾರ್(20) ಮೃತ ವ್ಯಕ್ತಿ. ಡಿ.8 ರಂದು ಹಳೇ ಕಟ್ಟಡ ತೆರವು ವೇಳೆ ಗೋಡೆ ಸಮೇತ ಮೊಬೈಲ್ ಟವರ್ ಕಂಬ ನೆರಕ್ಕುರುಳಿತ್ತು. ಇಂದು ಮುರಿದುಬಿದ್ದಿದ್ದ ಟವರ್ ಕಂಬ ತೆರವುಗೊಳಿಸುವಾಗ ವಿದ್ಯುತ್ ಸ್ಪರ್ಶವಾಗಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಜೈನ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಡಿ.8 ರಂದು ಕಟ್ಟಡವೊಂದರ ಮೇಲೆ ಇದ್ದ ಮೊಬೈಲ್ ಟವರ್ ಏಕಾಏಕಿಯಾಗಿ ಧರೆಗುರುಳಿತ್ತು. ಟವರ್ ಇದ್ದ ಕಟ್ಟಡದ ಪಕ್ಕದಲ್ಲಿ ಹೊಸ ಮನೆ ನಿರ್ಮಾಣ ಮಾಡುವ ಸಲುವಾಗಿ, ಇದ್ದ ಹಳೆ ಮನೆಯನ್ನು ಜೆಸಿಬಿ ಮೂಲಕ ಕೆಡವಲಾಗುತ್ತಿತ್ತು. ಈ ವೇಳೆ ಮೊಬೈಲ್ ಟವರ್ ಧರೆಗುರುಳಿತ್ತು. ಅದೃಷ್ಟವಶಾತ್ ಮೊಬೈಲ್ ಟವರ್ ಪಕ್ಕದ ಬಿಲ್ಡಿಂಗ್ನಲ್ಲಿದ್ದ 11 ಜನರು ಪ್ರಾಣಾಪಾಯದಿಂದ ಪಾರಾಗಿದ್ದರು.
ಟವರ್ ಬೀಳುವ ಮುನ್ಸೂಚನೆ ಪಡೆದ ಜನರು, ಕೂಡಲೇ ಎಚ್ಚೆತ್ತು ಕಟ್ಟಡದಲ್ಲಿ ವಾಸಿಸುತ್ತಿದ್ದ ಎಲ್ಲರನ್ನೂ ಹೊರ ಕರೆದಿದ್ದಾರೆ. ನಂತರದ ಕೆಲವೇ ಕ್ಷಣಗಳಲ್ಲಿ ಟವರ್ ಕುಸಿದು ಬಿದಿದ್ದು, ಒಂದು ಹಣ್ಣಿನ ಅಂಗಡಿ ಮತ್ತು ಬಂಬು ಅಂಗಡಿಗೆ ಹಾನಿಯಾಗಿತ್ತು. ಇದೀಗ ಕಂಬವನ್ನು ತೆರೆವು ಕಾರ್ಯಾಚರಣೆ ವೇಳೆ ಈ ದುರ್ಘಟನೆ ನಡೆದಿದೆ.