ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳ ಕುರಿತಂತೆ ಮಾಹಿತಿ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಈ ಕುರಿತಂತೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಎನ್‌ಐಎ, ಆರೋಪಿಗಳ ಬಂಧನಕ್ಕೆ ಅಗತ್ಯವಾದ ಮಾಹಿತಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು.ಜೊತೆಗೆ, ಮಾಹಿತಿದಾರರ ವಿವರವನ್ನು ಗೋಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ.
15ನೇ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಮೊಹಮ್ಮದ್ ಮುಸ್ತಫಾ, 16ನೇ ಆರೋಪಿಯಾಗಿರುವ ನಕ್ಕಿಲ್ಯಾಡಿ ಮೂಲದ ಮಸೂದ್ ಅಂಗಡಿ, 17ನೇ ಆರೋಪಿಯಾಗಿರುವ ಬಂಟ್ವಾಳ ಮೂಲದ ಮೊಹಮ್ಮದ್ ಶರೀಫ್, 18ನೇ ಆರೋಪಿ ಉಮರ್ ಆರ್., ಹಾಗೂ 19ನೇ ಆರೋಪಿಯಾಗಿರುವ ಬೆಳ್ಳಾರೆ ಮೂಲದ ಅಬೂಬಕ್ಕರ್ ಸಿದ್ದಿಕಿಯ ಕುರಿತು ಮಾಹಿತಿ ನೀಡಿದರೆ ಸೂಕ್ತ ಬಹುಮಾನ ನೀಡುವುದಾಗಿ ಘೋಷಿಸಿದೆ.
ಆರೋಪಿಗಳ ಫೋಟೋ ಹಾಗೂ ವಿಳಾಸ ಸಮೇತ NIA ಮಾಹಿತಿಯನ್ನು ಪ್ರಕಟಿಸಿದೆ. ಮಾಹಿತಿ ಕಳುಹಿಸಲು ವಾಟ್ಸ್‌ಆಯಪ್ ಸಂಖ್ಯೆಯನ್ನು ಎನ್‌ಐಎ ನೀಡಿದೆ.
2022ರ ಜುಲೈ 26ರಂದು ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಬೈಕ್‌ನಲ್ಲಿ ಬಂದ ಅಪರಿಚಿತರು ತಲವಾರಿನಿಂದ ಪ್ರವೀಣ್ ಅವರ ತಲೆಗೆ ಹೊಡೆದು ಪರಾರಿಯಾಗಿದ್ದರು.