ಸಮಗ್ರ ನ್ಯೂಸ್: ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಯುವನಿಧಿ ಯೋಜನೆಯ ಅರ್ಜಿ ಸಲ್ಲಿಕೆ ದಿನಾಂಕವನ್ನು ಸರ್ಕಾರ ಮತ್ತೆ ಮುಂದೂಡಿದೆ.
2024ರ ಜನವರಿಯಲ್ಲಿ ಯುವನಿಧಿ ಯೋಜನೆಗೆ ಅಧಿಕೃತ ಚಾಲನೆ ಸಿಗುವ ಸಾಧ್ಯತೆ ಇದ್ದು, ಈ ಹಿಂದೆ ಸರ್ಕಾರ ಡಿಸೆಂಬರ್ 21ರಂದು ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭಿಸಲು ಚಿಂತನೆ ನಡೆಸಿತ್ತು. ಆದರೆ ಮಹತ್ವದ ಬೆಳವಣಿಗೆಯಲ್ಲಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಸರ್ಕಾರ ಮಂದೂಡಿದ್ದು, ಡಿಸೆಂಬರ್ 26ಕ್ಕೆ ನಿಗದಿಪಡಿಸಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು ಆರು ತಿಂಗಳು ಪೂರೈಸಿದವರು ಮತ್ತು ಉನ್ನತ ಶಿಕ್ಷಣ ಅಥವಾ ಯಾವುದೇ ಉದ್ಯೋಗಕ್ಕೆ ಸೇರದೇ ಇರುವವರು ಮತ್ತು ಡಿಪ್ಲೋಮಾ ತೇರ್ಗಡೆ ಆದವರಿಗೆ ಈ ಯೋಜನೆ ಅನ್ವಯಿಸಲಿದೆ. ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ., ಹಾಗೂ ಡಿಪ್ಲೋಮಾ ಹೊಂದಿರುವವರಿಗೆ 1,500 ಆರ್ಥಿಕ ನೆರವು ನೀಡಲಾಗುತ್ತದೆ. ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷ ಅವಧಿಯಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.