ಸಮಗ್ರ ನ್ಯೂಸ್: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಉಜೈನ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಮೋಹನ್ ಯಾದವ್ ಅವರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ನಿರ್ಧಾರದ ಮೂಲಕ ಆಯ್ಕೆ ಮಾಡಲಾಗಿದೆ. ಸುದೀರ್ಘ ವರ್ಷಗಳ ಕಾಲ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಶಿವರಾಜ್ ಸಿಂಗ್ ಚವ್ಹಾಣ್ ಬದಲಾಗಿ ಒಬಿಸಿ ನಾಯಕ ಯಾದವ್‍ಗೆ ಮಣೆ ಹಾಕಲಾಗಿದೆ ಜಗದೀಶ್ ದೇವಾಡ, ರಾಜೇಶ್ ಶುಕ್ಲಾ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ವಿಧಾನಸಭೆಯ ಸ್ಪೀಕರ್ ಆಗಿ ತೋಮರ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಧ್ಯಪ್ರದೇಶಕ್ಕೆ ಬಿಜೆಪಿ ವೀಕ್ಷಕರಾದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಒಬಿಸಿ ಮೋರ್ಚಾ ಮುಖ್ಯಸ್ಥ ಕೆ ಲಕ್ಷ್ಮಣ್ ಹಾಗೂ ಕಾರ್ಯದರ್ಶಿ ಆಶಾ ಲಕ್ರಾ 163 ಬಿಜೆಪಿ ಶಾಸಕರ ಸಭೆ ನಡೆಸಿದ್ದಾರೆ.
2013, 2018 ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಮೋಹನ್ ಯಾದವ್ ಭರ್ಜರಿ ಗೆಲುವು ಸಾಧಿಸಿದ್ದು, 2023ರ ಚುನಾವಣೆಯಲ್ಲಿ ಉಜೈನಿ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನ ಪ್ರೇಮ್‍ನಾರಾಯಣ್ ಯಾದವ್ ವಿರುದ್ಧ 12,941 ಮತಗಳ ಅಂತರದಲ್ಲಿ ಗೆದ್ದು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 58 ವರ್ಷದ ಮೋಹನ್ ಯಾದವ್, 2020ರಲ್ಲಿ ಶಿವರಾಜ್ ಸಿಂಗ್ ಚವ್ಹಾಣ್ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.