ಸಮಗ್ರ ನ್ಯೂಸ್: ಧರ್ಮಸ್ಥಳಕ್ಕೆ ಬಸ್ಸಿಲ್ಲ ಎಂದು ನೂರಾರು ಪ್ರಯಾಣಿಕರು ಶನಿವಾರ ಮಧ್ಯರಾತ್ರಿ ದಿಢೀರ್ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಡಿ. 12ರಂದು ಮಂಜುನಾಥ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ. ಈ ವಿಶೇಷ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ತೆರಳಲು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರಯಾಣಿಕರು ನಿತ್ಯ ಸಂಚರಿಸುತ್ತಿದ್ದಾರೆ.
ಕಳೆದ ರಾತ್ರಿ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಂದಿದ್ದ ನೂರಾರು ಪ್ರಯಾಣಿಕರು ಬಸ್ಸು ಇಲ್ಲದ್ದರಿಂದ ನಿಲ್ದಾಣದ ಒಳಗಡೆಯೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಸಂಜೆ 7 ಗಂಟೆಗೆ ನಿಲ್ದಾಣಕ್ಕೆ ಬಂದರೂ ಕೂಡ ಧರ್ಮಸ್ಥಳಕ್ಕೆ ಬಸ್ ಇರಲಿಲ್ಲ.
ಬೇರೆ-ಬೇರೆ ಮಾರ್ಗಗಳಿಂದ ಬಸ್ ಬಂದರೂ ಕೂಡ ಶಕ್ತಿ ಯೋಜನೆಯಿಂದಾಗಿ ಬಸ್ಸಿನಲ್ಲಿ ನಿಲ್ಲುವುದಕ್ಕೂ ಜಾಗ ಇರಲಿಲ್ಲ. ಹಾಗಾಗಿ ಪ್ರಯಾಣಿಕರು ಬೇರೆ ಬಸ್ಸಿನಲ್ಲಿ ಹೋಗೋಣ ಎಂದು ಕಾದು ಕುಳಿತಿದ್ದಾರೆ. ಬಸ್ ಸಿಗದ ಕಾರಣ ದೂರದ ಊರಿನಿಂದ ಬಂದಿದ್ದಂತಹ ನೂರಾರು ಮಹಿಳೆಯರು ಹಾಗೂ ಮಕ್ಕಳು ಸರ್ಕಾರಿ ಬಸ್ ನಿಲ್ದಾಣದೊಳಗಡೆ ಮಲಗಿದ್ದರು. ಪ್ರಯಾಣಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬಸ್ ಡಿಪೋ ಅಧಿಕಾರಿಗಳು ಬೇಲೂರು ಡಿಪೋದ ಬಸ್ಸುಗಳ ಮೂಲಕ ಪ್ರಯಾಣಿಕರನ್ನು ಧರ್ಮಸ್ಥಳಕ್ಕೆ ಕಳುಹಿಸಿದ್ದಾರೆ.
ಇಂದಿನಿಂದ ಧರ್ಮಸ್ಥಳಕ್ಕೆ ಬಸ್ : ಲಕ್ಷ ದೀಪೋತ್ಸವ ಇರುವುದರಿಂದ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ. ಹಾಗಾಗಿ ಇಂದಿನಿಂದ ಮೂರು ದಿನಗಳ ಕಾಲ ಚಿಕ್ಕಮಗಳೂರಿನ ಆರು ಡಿಪೋಗಳಿಂದಲೂ ಕೂಡ ಧರ್ಮಸ್ಥಳಕ್ಕೆ ಬಸ್ಸುಗಳನ್ನು ಬಿಡಲು ಬಿಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ಸಂಜೆಯ ಬಳಿಕ ಐದು ಬಸ್ ಗಳು ನಿತ್ಯ ಧರ್ಮಸ್ಥಳಕ್ಕೆ ತೆರಳಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶನಿವಾರವೇ ಬಸ್ಸುಗಳನ್ನು ಬಿಡುತ್ತಿದ್ದೆವು. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಾರೆ ಎಂದು ಊಹಿಸಿರಲಿಲ್ಲ. ಹಾಗಾಗಿ ಸಮಸ್ಯೆಯಾಗಿದೆ. ಇಂದಿನಿಂದ ಬಸ್ಸುಗಳು ಓಡಾಡಲಿದ್ದು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.