ಸಮಗ್ರ ನ್ಯೂಸ್: ನಗರದಲ್ಲಿ ಖಾಸಗಿ ಬಸ್ ರೂಟ್ ಗಳಿಗೆ ಕನ್ನಡ ನಾಮಫಲಕ ಸ್ಟಿಕರ್ ಅಭಿಯಾನ ನಡೆದಿತ್ತು. ಆದರೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಡಿ. 10 ರಿಂದ ಪೂರ್ಣ ಪ್ರಮಾಣದಲ್ಲಿ ಈ ಅಭಿಯಾನ ಆರಂಭಿಸಲು ಕನ್ನಡಪರ ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ. ಇದರ ನಡುವೆ ಕನ್ನಡ ಸ್ಟಿಕರ್ ಅಭಿಯಾನಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬಸ್ ಗಳಿಗೆ ಸ್ಟಿಕರ್ ಅಂಟಿಸಿ ಸ್ಥಳದಲ್ಲಿಯೇ ಬಸ್ ಸಿಬ್ಬಂದಿಯಿಂದ ಸ್ಟಿಕರ್ ನ ಬಾಬ್ತು ಹಣವನ್ನು ವಸೂಲಿ ಮಾಡಲಾಗಿದೆ. ಆದರೆ ಯಾವುದೇ ರಶೀದಿ ನೀಡದೇ ಕನ್ನಡ ನಾಮಫಲಕ ಅಭಿಯಾನದ ಹೆಸರಿನಲ್ಲಿ ದುಡ್ಡು ಮಾಡುವ ದಂಧೆ ಎನ್ನುವ ಆರೋಪವು ಕೇಳಿಬಂದಿದೆ.
ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾದೇಶಿಕ ಭಾಷೆಯಾಗಿ ತುಳು ಗುರುತಿಸಿಕೊಂಡಿದೆ. ಅಲ್ಲದೇ ದೇಶದ ವಿವಿಧ ರಾಜ್ಯಗಳಿಗೆ ಸೇರಿದ ಜನ ಮಂಗಳೂರಲ್ಲಿ ಉದ್ಯೋಗ ಮಾಡ್ತಿದ್ದಾರೆ. ಹೀಗಾಗಿ ತುಳು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬೋರ್ಡ್ ಇರೋದರಿಂದ ತಪ್ಪೇನು ಎಂದು ಮಂಗಳೂರಿನ ಕೆಲ ಜನರು ಕನ್ನಡ ಸ್ಟಿಕರ್ ಅಭಿಯಾನದ ವಿರುದ್ಧ ಸಿಡಿದೆದ್ದಿದ್ದಾರೆ.
ತುಳು ಭಾಷಿಕರೇ ಹೆಚ್ಚಿರುವ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕಾಗಿ ಹೋರಾಟಗಳು ನಡೆಯುತ್ತಲೇ ಇವೆ. ಹೀಗಿರುವಾಗ ಈಗ ಕನ್ನಡ ಸ್ಟಿಕರ್ ಅಭಿಯಾನ ಹಾಗೂ ಅದಕ್ಕೆ ಬಾಬ್ತು ವಸೂಲಿಗೆ ಇಳಿದಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಒತ್ತಾಯಪೂರ್ವಕ ಕನ್ನಡ ಹೇರಿಕೆಯನ್ನು ನಾವು ಒಪ್ಪಲ್ಲ ಅನ್ನೋದು ಖಾಸಗಿ ಬಸ್ ಮಾಲೀಕರು ಹಾಗೂ ತುಳು ಭಾಷಿಗರು ಸಿಡಿದೆದ್ದಿದ್ದಾರೆ.