ಸಮಗ್ರ ನ್ಯೂಸ್: ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗಿ ಹತ್ಯೆಯಾದ ಧರ್ಮಸ್ಥಳ ಸಮೀಪದ ಪಾಂಗಾಳದ ಅಪ್ರಾಪ್ತ ಬಾಲಕಿ ಸೌಜನ್ಯಳ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಅಳವಡಿಸಲಾದ ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಿದೆ. ಈ ಹಿನ್ನಲೆಯಲ್ಲಿ ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ತಾಲೂಕಿನ ಎಲ್ಲಾ ಗ್ರಾ.ಪಂ ಪಿಡಿಒ ಗಳಿಗೆ ಬ್ಯಾನರ್ ಅಳವಡಿಕೆ ಕುರಿತು ಕ್ರಮವಹಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ.
ಸುಳ್ಯ ತಾಲೂಕಿನಾದ್ಯಂತ ಹಲವು ಕಡೆಗಳಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟಗಾರರು ಬ್ಯಾನರ್ ಅಳವಡಿಕೆ ಮಾಡಿದ್ದು, ಇದಕ್ಕಾಗಿ ಸ್ಥಳೀಯ ಪಂಚಾಯತ್ ಗಳ ಅನುಮತಿ ಪಡೆದುಕೊಂಡಿದ್ದಾರೆ. ಆದರೆ ಸಂತ್ರಸ್ತೆಯ ಫೋಟೋ ಸಹಿತ ಬ್ಯಾನರ್ ಅಳವಡಿಕೆ ಕಾನೂನು ಪ್ರಕಾರ ಅಪರಾಧ ಎಂದಿರುವ ಜನಜಾಗೃತಿ ವೇದಿಕೆ ಈ ಬ್ಯಾನರ್ ಗಳ ತೆರವಿಗೆ ತಾ.ಪಂ ಆಡಳಿತಕ್ಕೆ ಮನವಿ ಮಾಡಿದೆ.
ಪಿಡಿಒ ಗಳು ಕಾನೂನಿಗೆ ವಿರುದ್ಧವಾಗಿ ಅನುಮತಿ ನೀಡಿದ್ದಾರೆ ಎಂದು ಜನಜಾಗೃತಿ ವೇದಿಕೆ ಆರೋಪಿಸಿದ್ದು, ಈ ಹಿನ್ನಲೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕ್ರಮ ವಹಿಸಲು ಸುತ್ತೋಲೆ ಹೊರಡಿಸಿದ್ದಾರೆ.