ಸಮಗ್ರ ನ್ಯೂಸ್: ಡಿಸೆಂಬರ್ 13, 2001ರಂದು ದೇಶದ ಹೆಮ್ಮೆಯ ಪ್ರತೀಕವಾಗಿದ್ದ ಸಂಸತ್ ಭವನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಚಳಿಗಾಲದ ಅಧಿವೇಶನದ ವೇಳೆಯೇ ಸಂಸತ್ ಭವನದ ಬಳಿ ನುಗ್ಗಿದ್ದ ಉಗ್ರರು, ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 9 ಮಂದಿ ಪ್ರಾಣತೆತ್ತಿದ್ದು, ಹಲವರು ಗಾಯಗೊಂಡಿದ್ದರು. ಈ ದಾಳಿಯ ಪ್ರಮುಖ ರೂಪಾರಿ ಉಗ್ರ ಅಫ್ಜಲ್ ಗುರುಗೆ 2013ರಲ್ಲಿ ಗಲ್ಲು ಶಿಕ್ಷೆ ನೀಡಲಾಯಿತು. ಸಂಸತ್ ಭವನದ ಈ ಕರಾಳ ದಾಳಿಗೆ ಇದೇ 13ರಂದು 22 ವರ್ಷಗಳಾಗುತ್ತವೆ. ಆದರೆ ಇದೀಗ ಮತ್ತೆ ಸಂಸತ್ ಭವನಕ್ಕೆ ಉಗ್ರರ ದಾಳಿ ಬೆದರಿಕೆ ಬಂದಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ವಿಡಿಯೋ ಕಳಿಸಿದ್ದಾನೆ.
.ಈ ವಿಡಿಯೋದಲ್ಲಿ ಡಿಸೆಂಬರ್ 13 ಅಥವಾ ಅದಕ್ಕಿಂತ ಮೊದಲು ಭಾರತೀಯ ಸಂಸತ್ ಭವನದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸಂಸತ್ ಭವನದ ದಾಳಿ ಮಾಡಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಉಗ್ರ ಅಫ್ಜಲ್ ಗುರು ಫೋಟೋ ಹಾಕಿಕೊಂಡಿದ್ದಾನೆ. ದಿಲ್ಲಿಯು ಖಲಿಸ್ತಾನ್ ಆಗಲಿದೆ ಎಂಬ ಬರಹವುಳ್ಳ ಅಫ್ಜಲ್ ಗುರುವಿನ ಚಿತ್ರವುಳ್ಳ ಪೋಸ್ಟರ್ ಅನ್ನು ಈ ವಿಡಿಯೋದಲ್ಲಿ ಹಾಕಿದ್ದಾನೆ.
ಅಮೆರಿಕಾದಲ್ಲಿರುವ ಭಾರತೀಯ ಮೂಲದ ವ್ಯಕ್ತಿ ನಿಖಿಲ್ ಗುಪ್ತಾ ಪನ್ನುನ್ ಹತ್ಯೆಗೆ ಯತ್ನಿಸಿದ್ದ ಅಂತ ಅಮೆರಿಕ ಆರೋಪಿಸಿತ್ತು. ಇದೇ ವಿಚಾರಕ್ಕೆ ಸಂಸತ್ ಮೇಲೆ ದಾಳಿ ಮಾಡೋದಾಗಿ ಪನ್ನುನ್ ಬೆದರಿಕೆ ಹಾಕಿದ್ದಾನೆ. ನನ್ನ ಹತ್ಯೆಗೆ ವಿಫಲ ಯತ್ನ ನಡೆಸಿತ್ತು. ಈ ಹತ್ಯೆ ಯತ್ನಕ್ಕೆ ಪ್ರತಿಕಾರವಾಗಿ ಸಂಸತ್ ಭವನದ ಮೇಲೆ ದಾಳಿ ಮಾಡ್ತೀನಿ ಅಂತ ಪನ್ನುನ್ ಎಚ್ಚರಿಸಿದ್ದಾನೆ.
ಪನ್ನುನ್ ಈ ಹಿಂದೆಯೂ ಭಾರತ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಬೆದರಿಕೆ ಹಾಕಿದ್ದ. ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ನಡೆಯೋದಕ್ಕೆ ನಾವು ಬಿಡುವುದಿಲ್ಲ, ಮ್ಯಾಚ್ ನಿಲ್ಲಿಸಿಯೇ ನಿಲ್ಲಿಸುತ್ತೇವೆ ಅಂತ ಬೆದರಿಕೆ ಹಾಕಿದ್ದ.