ಸಮಗ್ರ ನ್ಯೂಸ್: ಕಾಡುಕೋಣ ದಾಳಿಯಿಂದ ಕಾಫಿತೋಟದ ಮ್ಯಾನೇಜರ್ ಒಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಸಾರಗೋಡು ಗ್ರಾಮದಲ್ಲಿ ದ.4 ರಂದು ಮಧ್ಯಾಹ್ನ ನಡೆದಿದೆ.
ಸಾರಗೋಡು ಗ್ರಾಮದ ಎಸ್.ಟಿ. ಸುರೇಂದ್ರಗೌಡ ಎಂಬುವರ ಹಲಸೂರು ಎಸ್ಟೇಟ್ ನಲ್ಲಿ ಈ ಘಟನೆ ಸಂಭವಿಸಿದ್ದು, ಸೋಮವಾರ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲ್ವಿಚಾರಣೆ ಮಾಡಲು ತೆರಳಿದ್ದಾಗ ಎಸ್ಟೇಟ್ ಮ್ಯಾನೇಜರ್ ಸುನಿಲ್ ಅವರ ಮೇಲೆ ಕಾಡುಕೋಣ ದಾಳಿಮಾಡಿದೆ ಎಂದು ತಿಳಿದುಬಂದಿದೆ.
ಹಲಸೂರು ಎಸ್ಟೇಟ್ ಗೆ ಎಲೆಕ್ಟ್ರೀಕ್ ಬೇಲಿ ಇದ್ದರೂ ಸಹ ಅದನ್ನು ದಾಟಿ ಬಂದಿರುವ ಕಾಡುಕೋಣ ಸುನಿಲ್ ಅವರ ಮೇಲೆ ಏಕಾಏಕಿ ದಾಳಿಮಾಡಲು ಮುಂದಾಗಿದೆ. ಆಗ ಅವರು ದೊಡ್ಡ ಕಾಫಿ ಗಿಡವೊಂದನ್ನು ಏರಿದ್ದಾರೆ. ಕಾಡುಕೋಣ ಆ ಕಾಫಿ ಗಿಡವನ್ನೇ ಬುಡಸಮೇತ ಕಿತ್ತು ಬೀಳಿಸಿದೆ. ನೆಲಕ್ಕೆ ಬಿದ್ದ ಸುನಿಲ್ ಅವರು ಸಾವರಿಸಿಕೊಂಡು ಮತ್ತೊಂದು ಗಿಡವನ್ನು ಏರುವ ಸಂದರ್ಭದಲ್ಲಿ ಅವರ ಕಾಲಿನ ಭಾಗಕ್ಕೆ ಕಾಡುಕೋಣ ತಿವಿದಿದೆ. ಅದೃಷ್ಟಾವಸತ್ ಅವರು ಕಾಫಿ ಗಿಡವನ್ನು ಏರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಗಾಯಾಳು ಸುನಿಲ್ ಅವರನ್ನು ತಕ್ಷಣ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಇನ್ನು ನಾಲ್ಕು ದಿನದ ಹಿಂದೆ ಮೂಡಿಗೆರೆ ಸಮೀಪದ ಲೋಕವಳ್ಳಿಯಲ್ಲಿ ವ್ಯಕ್ತಿಯೋರ್ವರ ಮೇಲೆ ಕಾಡುಕೋಣ ದಾಳಿ ನಡೆಸಿ ಗಾಯಗೊಳಿಸಿತ್ತು. ಮಲೆನಾಡು ಭಾಗದಲ್ಲಿ ಈಗ ಕಾಡಾನೆಗಳ ಜೊತೆಗೆ ಕಾಡುಕೋಣಗಳ ಹಾವಳಿ ಮಿತಿಮೀರಿದೆ. ಹಿಂಡು ಹಿಂಡು ಕಾಡುಕೋಣಗಳು ತೋಟ ಗದ್ದೆಗಳಿಗೆ ದಾಳಿಯಿಡುತ್ತಿವೆ. ಇದರಿಂದ ಕಾರ್ಮಿಕರು ಕಾಫಿ ತೋಟಗಳಿಗೆ ತೆರಳಲು ಭಯಪಡುವಂತಾಗಿದೆ.
ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ವಹಿಸದೇ ಇದ್ದರೆ ಮಲೆನಾಡಿನಲ್ಲಿ ಕೃಷಿ ಕಾರ್ಯ ಮಾಡುವುದೇ ದುಸ್ತರವೆನ್ನುವ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಕಾಡುಕೋಣಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.